ವಾಟ್ಸ್ ಆ್ಯಪ್ ಬಗ್ ಕಂಡುಹಿಡಿದ ಇಂಪಾಲದ ಯುವಕನಿಗೆ ಫೇಸ್‌ಬುಕ್‌ನಿಂದ 5 ಸಾವಿರ ಡಾಲರ್ ಬಹುಮಾನ

Update: 2019-06-11 16:14 GMT

ಇಂಫಾಲ, ಜೂ. 11: ಬಳಕೆದಾರರ ಖಾಸಗಿತನ ಉಲ್ಲಂಘಿಸುವ ವ್ಯಾಟ್ಸ್ ಆ್ಯಪ್ ಬಗ್ ಅನ್ನು ಕಂಡುಹಿಡಿದ ಮಣಿಪುರದ ಯುವಕನೋರ್ವನಿಗೆ ಫೇಸ್‌ಬುಕ್ 5 ಸಾವಿರ ಅಮೆರಿಕನ್ ಡಾಲರ್ ಬಹುಮಾನ ನೀಡಿ ಗೌರವಿಸಿದೆ.

ವ್ಯಾಟ್ಸ್ ಆ್ಯಪ್ ಬಗ್ ಅನ್ನು ಕಂಡು ಹಿಡಿದದ್ದಕ್ಕೆ ಸಾಮಾಜಿಕ ಜಾಲ ತಾಣದ ದಿಗ್ಗಜ ಪೇಸ್‌ಬುಕ್ ನನಗೆ 5 ಸಾವಿರ ಅಮೆರಿಕನ್ ಡಾಲರ್ ಬಹುಮಾನ ನೀಡಿದೆ ಹಾಗೂ ನನ್ನ ಹೆಸರನ್ನು ಫೇಸ್‌ಬುಕ್‌ನ ಜನಪ್ರಿಯ ವ್ಯಕ್ತಿಗಳ ಪಟ್ಟಿ-2019ರಲ್ಲಿ ಸೇರಿಸಿದೆ ಎಂದು ಇಂಫಾಲದ ಸಿವಿಲ್ ಎಂಜಿನಿಯರ್ ಹಾಗೂ 22 ವರ್ಷದ ಯುವಕ ರೆನೆಲ್ ಸೌಗೈಜಾಮ್ ತಿಳಿಸಿದ್ದಾರೆ.

ಫೇಸ್‌ಬುಕ್‌ನ ಈ ವರ್ಷದ 94 ಜನಪ್ರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಸೌಗೈಜಾಮ್ ಅವರು 16ನೇ ಸ್ಥಾನ ಪಡೆದುಕೊಂಡಿದ್ದಾರೆ. “ನಾನು ಬಗ್ ಅನ್ನು ಅನ್ವೇಷಿಸಿದ ಬಳಿಕ ಮಾರ್ಚ್‌ನಲ್ಲಿ ಖಾಸಗಿ ವಿಷಯ ಉಲ್ಲಂಘನೆ ನಿರ್ವಹಿಸುವ ಫೇಸ್ ಬುಕ್‌ನ ಬಗ್ ಬೌಂಟಿ ಕಾರ್ಯಕ್ರಮಕ್ಕೆ ಮಾಹಿತಿ ನೀಡಿದೆ” ಎಂದು ಸೌಗೈಜಾಮ್ ತಿಳಿಸಿದ್ದಾರೆ. ಮರು ದಿನವೇ ನನ್ನ ವರದಿಯನ್ನು ಫೇಸ್‌ಬುಕ್‌ನ ಭದ್ರತಾ ತಂಡ ಪರಿಗಣನೆಗೆ ತೆಗೆದುಕೊಂಡಿತು. 15ರಿಂದ 20 ದಿನಗಳಲ್ಲಿ ತಾಂತ್ರಿಕ ವಿಭಾಗ ಬಗ್ ಅನ್ನು ಪರಿಹರಿಸಿತು. ‘ಈ ವಿಷಯವನ್ನು ಪರಿಶೀಲನೆ ನಡೆಸಿದ ಬಳಿಕ, ನಿಮಗೆ 5 ಸಾವಿರ ಅಮೆರಿಕನ್ ಡಾಲರ್ ಬಹುಮಾನ ನೀಡಲು ನಾವು ನಿರ್ಧರಿಸಿದ್ದೇವೆ’’ ಎಂದು ಸೌಗೈಜಾಮ್‌ಗೆ ಫೇಸ್‌ಬುಕ್ ಕಳುಹಿಸಿದ ಈಮೇಲ್‌ನಲ್ಲಿ ಹೇಳಲಾಗಿದೆ.

ವಾಟ್ಸ್ ಆ್ಯಪ್ ಮೂಲಕ ವಾಯ್ಸ್ ಕಾಲ್ ಮಾಡುವ ಸಂದರ್ಭ ಸ್ವೀಕರಿಸುವವರ ಅನುಮತಿ ಹಾಗೂ ಅರಿವು ಇಲ್ಲದೆ ಕರೆಯನ್ನು ವೀಡಿಯೊ ಕಾಲ್ ಆಗಿ ಮೇಲ್ತರ್ಜೆಗೇರಿಸಲು ಕರೆದಾರರಿಗೆ ಅವಕಾಶ ನೀಡಲು ಈ ಬಗ್ ಅನ್ನು ಬಳಸಲಾಗುತ್ತದೆ. ಅನಂತರ ಕರೆದಾರನಿಗೆ ಕರೆ ಸ್ವೀಕರಿಸಿದ ವ್ಯಕ್ತಿ ಏನು ಮಾಡುತ್ತಿದ್ದಾನೆ ಎಂದು ನೋಡಲು ಸಾಧ್ಯವಾಗುತ್ತದೆ. ಇಂದು ಸ್ವೀಕರಿಸುವವರ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಸೌಗೈಜಾಮ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News