ಜೂ.15-16 : ಪುತ್ತೂರಿನಲ್ಲಿ 'ಹಲಸು ಸಾರ ಮೇಳ'

Update: 2019-06-11 16:37 GMT

ಪುತ್ತೂರು: ಪುತ್ತೂರು ಹಲಸು ಸ್ನೇಹ ಸಂಗಮ ವತಿಯಿಂದ ಬೃಹತ್ "ಹಲಸು ಸಾರ ಮೇಳ-2019" ಜೂ.15 ಹಾಗೂ 16 ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಹಲಸು ಸ್ನೇಹ ಸಂಗಮದ ಕಾರ್ಯದರ್ಶಿ ಸುಹಾಸ ಎ.ಪಿ.ಮರಿಕೆ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜೂ.15ರಂದು ಬೆಳಗ್ಗೆ 10 ಗಂಟೆಗೆ ಮೇಳವನ್ನು ಬೆಂಗಳೂರು ಐಐಹೆಚ್‍ಆರ್ ನಿರ್ದೇಶನ ಡಾ.ದಿನೇಶ್ ಉದ್ಘಾಟಿಸಲಿದ್ದು, ಹಲಸು ಸ್ನೇಹ ಸಂಗಮದ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಪುತ್ತೂರು ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ದಿಕ್ಸೂಚಿ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗಾಧಿಕಾರಿ  ಕೃಷ್ಣಮೂರ್ತಿ ಎಚ್.ಕೆ, ಮುಳಿಯ ಜ್ಯುವೆಲ್ಲರ್ಸ್‍ನ ಕೃಷ್ಣನಾರಾಯಣ ಮುಳಿಯ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ನಗರಸಭಾ ಸದಸ್ಯ ಶಕ್ತಿಸಿನ್ಹಾ ಪಾಲ್ಗೊಳ್ಳಲಿದ್ದಾರೆ.  11.15 ಗಂಟೆಗೆ  ಹಲಸಿನ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತು ದೇಶವಿದೇಶಗಳ ಆಗುಹೋಗುಗಳ ಕುರಿತು ಚಿತ್ರಣವನ್ನು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಹಾಗೂ ಬಿಇಎಎಸ್‍ಎಸ್‍ಟಿ ಹೊರ್ಟಿಕಲ್ಚರಲ್ ಟೆಕ್ನಾಲಜಿಯ ವೈಭವ್ ಬಿ.ಎಸ್. ಮಾಹಿತಿ ನೀಡುವರು. ಮಧ್ಯಾಹ್ನ 2.30 ಕ್ಕೆ "ಹಲಸಿನ ತಳಿಗಳು, ಕೃಷಿ ಕ್ರಮಗಳು, ತಾಂತ್ರಿಕತೆ ಹಾಗೂ ಅವಕಾಶಗಳ ಕುರಿತು ಹಿರೇಹಳ್ಳಿ ಸಿಎಚ್‍ಇಎಸ್‍ನ ವಿಜ್ಞಾನಿ ಡಾ.ಜಿ.ಕರುಣಾಕರನ್ ಹಾಗೂ ಡಾ.ಎಚ್.ಸಿ.ಪ್ರಸನ್ನ ಉಪನ್ಯಾಸ ನೀಡುವರು ಎಂದು ಅವರು ತಿಳಿಸಿದರು.

ಜೂ.16ರ ಬೆಳಗ್ಗೆ 10 ಗಂಟೆಗೆ ಪೆರ್ಲದ ಕೃಷಿಕ ವರ್ಮುಡಿ ಶಿವಪ್ರಸಾದ್ ಅವರಿಂದ ಹಲಸು ಕೃಷಿಯ ಅನುಭವ. 11.30 ಕ್ಕೆ ನಳಿನಿ ಮಾಯಿಲಂಕೋಡಿ ಹಾಗೂ ಎ.ಪಿ.ಉಮಾಶಂಕರಿ ಮರಿಕೆ ಅವರಿಂದ ಅಡುಗೆ ಖಾದ್ಯಗಳ ಪ್ರಾತ್ಯಕ್ಷಿಕೆ ನಡೆಯಲಿದೆ.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಅರಣ್ಯ ಅಧಿಕಾರಿ ಗ್ಯಾಬ್ರಿಯಲ್ ವೇಗಸ್ ಸಮಾರೋಪ ಭಾಷಣ ಮಾಡುವರು.  ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಆಲಂಗಾರಿನ ಕಸಿ ತಜ್ಞ ಕೃಷ್ಣ ಕೆದಿಲಾಯ ಅವರಿಗೆ ಗೌರವಾರ್ಪಣೆ ನಡೆಯಲಿದೆ.  ಮೇಳದ ಅಂಗವಾಗಿ ಹಲಸು ಚಿತ್ರ ಬಿಡಿಸುವುದು, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ನಡೆಯಲಿದೆ. ಡಿಂಡಿಮ ಬಳಗದಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.  ರೈತರಿಗೆ ವಿಶೇಷ ಹಲಸಿನ ಹಣ್ಣು ಹಾಗೂ ಇನ್ನಿತರ ಕಾಡು ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶವಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಲಸು ಸ್ನೇಹ ಸಂಗಮದ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್, ಜೆಸಿಐ ಅಧ್ಯಕ್ಷ ಗೌತಮ ರೈ, ಪ್ರಕಾಶ್ ಕೊಡಂಕಿರಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News