ಎಲ್ಲರಿಗೂ ಸಮಾನತೆ ಸಂವಿಧಾನದ ಮುಖ್ಯ ಆಶಯ- ನ್ಯಾ. ಅಬ್ದುಲ್ ನಝೀರ್

Update: 2019-06-11 16:38 GMT

ಪುತ್ತೂರು: ಸಂವಿಧಾನವು ಈ ದೇಶದ ಪರಮಶ್ರೇಷ್ಠ ಗ್ರಂಥವಾಗಿದ್ದು ಎಲ್ಲರಿಗೂ ಸಮಾನತೆ ಸಾರುವುದೇ ಸಂವಿಧಾನದ ಮುಖ್ಯ ಆಶಯವಾಗಿದೆ ಎಂದು ಸರ್ವೋಚ್ಛ ನ್ಯಾಯಾಯಲಯ ನ್ಯಾಯಮೂರ್ತಿ ಎಸ್ ಅಬ್ದುಲ್ ನಝೀರ್ ಹೇಳಿದರು.

ಅವರು ಮಂಗಳವಾರ ಪುತ್ತೂರಿನ ಈಶ್ವರಮಂಗಲದಲ್ಲಿರುವ ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಬಳಿಕ ಇಲ್ಲಿನ ಗಜಾನನ ವಿದ್ಯಾಸಂಸ್ಥೆಯಲ್ಲಿ ನಡೆದ ಮಕ್ಕಳೊಂದಿಗೆ `ಸಂವಿಧಾನದ ಆಶಯಗಳು' ಎಂಬ ವಿಚಾರದಲ್ಲಿ ಸಂವಾದ ನಡೆಸಿದರು. 

ಗಂಡು ಹೆಣ್ಣು ಎಂಬ ಬೇಧವಿಲ್ಲದೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಬೇಕೆನ್ನುವ ಆಶಯ ಸಂವಿಧಾನದ್ದಾಗಿದೆ ಎಂದ ಅವರು ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಸತತ ಪ್ರಯತ್ನದ ಮೂಲಕ ಹಾಗೂ ಜೀವನದಲ್ಲಿ ಸಾಧಿಸಬೇಕೆಂಬ ಛಲ ಇದ್ದರೆ, ಕಷ್ಟ ಪಟ್ಟರೆ ಯಾವ ಅಡೆತಡೆಯೂ ಇಲ್ಲದೇ ಯಶಸ್ಸನ್ನು ಗಳಿಸಬಹುದಾಗಿದೆ ಎಂದು ಹೇಳಿದರು. 

ಸ್ವಾಗತಿಸಿ ಮಾತನಾಡಿದ ಗಜಾನನ ವಿದ್ಯಾಸಂಸ್ಥೆಯ ಅಧ್ಯಕ್ಷರು, ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿಯಾಗಿರುವ ಅಚ್ಚುತ್ತ ಮೂಡೆತ್ತಾಯ ಅವರು ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರೋರ್ವರು ಗ್ರಾಮಾಂತರ ಪ್ರದೇಶದ ಶಿಕ್ಷಣ ಸಂಸ್ಥಗೆ ಭೇಟಿ ನೀಡುವುದೆಂದರೆ ಅದು ಇಲ್ಲಿನ ಮಕ್ಕಳ ಹಾಗೂ ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.

ಸಂವಾದ ಕಾರ್ಯಕ್ರಮ ನಡೆಸಿಕೊಟ್ಟ ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಸಂವಿಧಾನದ ಆಶಯವಾಗಿದೆ. ಆ ಆಶಯವನ್ನು ಉಪಯೋಗಿಸಿ ಇಂದು ಇಲ್ಲಿಗೆ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ಭೇಟಿ ನೀಡಿದ್ದಾರೆ. ಅಬ್ದುಲ್ ನಝೀರ್ ಅವರು ದೇಶದ ಅನೇಕ ಮಹತ್ವದ ವಿಷಯಗಳಲ್ಲಿ ನ್ಯಾಯದಾನ ನೀಡಿರುವ ನ್ಯಾಯಾಧೀಶರಾಗಿದ್ದಾರೆ ಎಂದು ಹೇಳಿದರು. ಬಳಿಕ ವಿದ್ಯಾರ್ಥಿಗಳಿಗೆ ನ್ಯಾಯವಾದಿ ಮಹೇಶ್ ಕಜೆ ಅವರು ಸಂವಿಧಾನದ ವಿಚಾರಗಳ ಮಾಹಿತಿ ನೀಡಿದರು.

ವೇದಿಕೆಯಲ್ಲಿ ನ್ಯಾಯಮೂರ್ತಿ ಅಬ್ದುಲ್ ನಝೀರ್‍ರವರ ಪತ್ನಿ ಸಮೀರಾ ಅಬ್ದುಲ್ ನಝೀರ್, ಹನುಮಗಿರಿ ಕ್ಷೇತ್ರದ ಮಹಾಪೋಷಕ ಮಹಾಬಲೇಶ್ವರ ಭಟ್, ಗಜಾನನ ವಿದ್ಯಾಸಂಸ್ಥೆಯ ಸಂಚಾಲಕ ಶಿವರಾಮ್ ಪಿ, ಪ್ರಾಂಶುಪಾಲ ಶಾಮಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News