ಬಂಟ್ವಾಳ ತಾಲೂಕಿನಾದ್ಯಂತ ಮಳೆ: ತಗ್ಗು ಪ್ರದೇಶಗಳಲ್ಲಿ ನೀರು ಶೇಖರಣೆ

Update: 2019-06-11 17:18 GMT

ಬಂಟ್ವಾಳ, ಜೂ. 11: ಸೋಮವಾರ ರಾತ್ರಿಯಿಂದೀಚೆಗೆ ವಿಟ್ಲ ಸಹಿತ ಬಂಟ್ವಾಳ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಹಲವೆಡೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಶೇಖರಣೆಗೊಂಡು ಜನರು ತೊಂದರೆ ಅನುಭವಿಸಿದರು.

ಬಿ.ಸಿ.ರೋಡ್ ಮೇಲ್ಸೆತುವೆ ಕೆಳಭಾಗ, ಪಾಣೆಮಂಗಳೂರು, ಬಂಟ್ವಾಳ ಪೇಟೆ ಸಹಿತ ಹಲವೆಡೆ ಚರಂಡಿಗಳು ಹೂಳೆತ್ತದ ಕಾರಣ ರಸ್ತೆಯಲ್ಲೇ ನೀರು ಹರಿದು ಮುಖ್ಯ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿದ್ದು, ಪಾದಚಾರಿಗಳು, ವಾಹನ ಸವಾರರ ಸಹಿತ ಸಾರ್ವಜನಿಕರು ತೀವ್ರ ತೊಂದರೆಗೊಳಗಾದರು.

ಬಿ.ಸಿ.ರೋಡಿನ ಫ್ಲೈ ಓವರ್ ಮೇಲ್ಭಾಗದಿಂದ ವಾಹನಗಳು ಸಂಚರಿಸುವಾಗ ನೀರು ಕೆಳಕ್ಕೆ ಚಿಮ್ಮುತ್ತಿದ್ದರೆ, ಸ್ಟೇಟ್‍ಬ್ಯಾಂಕ್ ಎದುರು ನಿರೀಕ್ಷೆಯಂತೆ ನೀರು ರಸ್ತೆಯ ಮಧ್ಯೆಯೇ ಹರಿಯುತ್ತಿತ್ತು. ಬಿ.ಸಿ.ರೋಡ್ ಸರ್ವೀಸ್ ರಸ್ತೆ ನಿರ್ಮಾಣವಾಗುವ ಸಂದರ್ಭವೇ ಸಮರ್ಪಕವಾದ ಚರಂಡಿ ವ್ಯವಸ್ಥೆ ಸಹಿತ ನೀರು ಹರಿದುಹೋಗಲು ಸರಿಯಾದ ರೂಪುರೇಷೆಗಳನ್ನು ಮಾಡದ ಪರಿಣಾಮ, ಪ್ರಯಾಣಿಕರು ಮತ್ತು ಪಾದಚಾರಿಗಳು ಅದರ ತೊಂದರೆ ಅನುಭವಿಸಿದರು.

ಬಿ.ಸಿ.ರೋಡಿನ ಸರ್ವೀಸ್ ಬಸ್‍ಗಳು ನಿಲ್ಲುವ ಜಾಗ ತಗ್ಗು ಪ್ರದೇಶದಲ್ಲಿದ್ದು, ಅದರ ಹಿಂದೆ ತಾಪಂ ಕಟ್ಟಡ ಕೆಡಹಿದ ಕಾರಣ ಅಲ್ಲಿಂದ ಮಣ್ಣು ಕರಗಿ ರಸ್ತೆಗೆ ಬರುತ್ತಿದ್ದು, ಅಲ್ಲಿಯು ನೀರು ನಿಂತು ತೊಂದರೆ ಉಂಟಾಯಿತು. ರಸ್ತೆ ಅವ್ಯವಸ್ಥೆ, ನೀರು ಹರಿದು ಹೋಗಲು ಸಮರ್ಪಕ ಜಾಗವಿಲ್ಲದಿರುವ ಕುರಿತು ಮಾಧ್ಯಮ ಗಳು, ನಾಗರಿಕ ಸಂಘಟನೆಗಳು ಎಚ್ಚರಿಸಿದ್ದರೂ ಈ ಕುರಿತು ಸಮಯಕ್ಕೆ ಸರಿಯಾಗಿ ಕಾರ್ಯಯೋಜನೆ ಹಾಕಿಕೊಳ್ಳದ ಕಾರಣ ಈ ಮಳೆಗಾಲದಲ್ಲಿ ಆಗಾಗ್ಗೆ ಇಂಥ ಸ್ಥಿತಿ ನಿರ್ಮಾಣವಾದರೆ ಆಶ್ಚರ್ಯವಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News