ಉಜಿರೆ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ, ಯೋಗ ವಿಜ್ಞಾನ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ

Update: 2019-06-11 17:31 GMT

ಬೆಳ್ತಂಗಡಿ: ರೋಗಿಗಳಿಗೆ ಸಾಂತ್ವನದ ಮಾತುಗಳೊಂದಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ ಅವರ ಭಯ, ಆತಂಕ ನಿವಾರಿಸಿ ರೋಗವನ್ನು ಶಮನ ಮಾಡಿ ಆರೋಗ್ಯರಕ್ಷಣೆ ಮಾಡುವುದು ವೈದ್ಯರ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ವೈದ್ಯ ವೃತ್ತಿ ಹಣ ಸಂಪಾದನೆಗಾಗಿ ಅಲ್ಲ. ಮಾನವೀಯತೆಯಿಂದ ಸೇವೆ ಮಾಡಲಿಕ್ಕಾಗಿ. ರೋಗಿಗಳ ಆರೋಗ್ಯ ಭಾಗ್ಯರಕ್ಷಣೆಗಾಗಿ ವಿವೇಚನೆಯಿಂದ ವೈದ್ಯರು ಅಲೊಪತಿ ಹಾಗೂ ಪಾರಂಪರಿಕಚಿಕಿತ್ಸಾ ವಿಧಾನವನ್ನು ಬಳಸಬೇಕು ಎಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ನಿರ್ದೇಶಕಡಾ. ಬಿ.ಎನ್. ಗಂಗಾಧರ್ ಹೇಳಿದರು.

ಅವರು ಉಜಿರೆಯಲ್ಲಿ ಎಸ್.ಡಿ.ಎಂ.ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಇಪ್ಪತ್ತೈದನೆ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ವೈದ್ಯ ವೃತ್ತಿ ಪವಿತ್ರ ವೃತ್ತಿಯಾಗಿದೆ. ರೋಗಿಗಳ ರೋಗವನ್ನು ಶಮನಗೊಳಿಸಿ ಆರೋಗ್ಯರಕ್ಷಣೆ ಮಾಡುವುದು ವೈದ್ಯರಕರ್ತವ್ಯವಾಗಿದೆ. ರೋಗದ ಲಕ್ಷಣ ರೋಗಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿ, ಜೀವನ ಶೈಲಿಯನ್ನು ಹೊಂದಿಕೊಂಡು ವಿವೇಚನೆಯಿಂದ ಸೂಕ್ತ ಚಿಕಿತ್ಸಾ ವಿಧಾನ ಬಳಸಬೇಕು. ಕೇವಲ ಅಲೋಪತಿಯಿಂದ ಅಥವಾ ಪಾರಂಪರಿಕ ಪದ್ಧತಿಗಳಾದ ಆಯುರ್ವೇದ, ಯುನಾನಿ, ಯೋಗ, ಪ್ರಕೃತಿಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸಾ ವಿಧಾನದಿಂದ ಎಲ್ಲಾ ರೋಗಗಳನ್ನು ಗುಣ ಪಡಿಸಲು ಸಾಧ್ಯವಿಲ್ಲ. ಆದುದರಿಂದ ವೈದ್ಯರು ವಿವೇಚನೆಯಿಂದರೋಗಿ ಮತ್ತು ರೋಗದ ಲಕ್ಷಣ ಹೊಂದಿಕೊಂಡು ಎಲ್ಲಾ ಪದ್ಧತಿಗಳ ಉತ್ತಮ ಅಂಶಗಳನ್ನು ಬಳಸಿ ಸಮಗ್ರಚಿಕಿತ್ಸಾ ವಿಧಾನದಿಂದ ರೋಗಿಗಳ ಸೇವೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಧಾರವಾಡದ ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕುಲಪತಿಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ವೈದ್ಯರು ರೋಗಿಗಳಲ್ಲಿ ಆತ್ಮವಿಶ್ವಾಸ ಮತ್ತು ಭರವಸೆ ಮೂಡಿಸಿ ಅವರನ್ನು ಗುಣಮುಖರನ್ನಾಗಿ ಮಾಡಬೇಕು. ರೋಗ ಬಂದ ಮೇಲೆ ಶಮನಗೊಳಿಸುವುದಕ್ಕಿಂತ  ರೋಗ ಬರದಂತೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅದಕ್ಕಾಗಿ ವೈದ್ಯರು ಸರಿಯಾದ ಆಹಾರ ಕ್ರಮ, ಜೀವನ ಶೈಲಿ, ಆರೋಗ್ಯಪೂರ್ಣ ಶಿಸ್ತಿನ ಜೀವನದ ಬಗ್ಯೆ ಮಾರ್ಗದರ್ಶನ, ಸಲಹೆ ನೀಡಬೇಕು.ರೋಗಿಗಳ ಸಮಸ್ಯೆ, ಆತಂಕವನ್ನು ತಾಳ್ಮೆಯಿಂದ, ಮಾನವೀಯತೆಯಿಂದ ಆಲಿಸಬೇಕು. ತಮ್ಮ ಪವಿತ್ರ ವೃತ್ತಿಯಲ್ಲಿ ಪ್ರತಿ ದಿನ ರೋಗಿಗಳಿಂದ ಹೊಸ ವಿಚಾರ, ಸಮಸ್ಯೆಗಳನ್ನು ತಿಳಿದುಕೊಂಡು ತಮ್ಮಜ್ಞಾನಕ್ಷಿತಿಜ ಹಾಗೂ ವೃತ್ತಿ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಧಾರವಾಡದಲ್ಲಿ ಡೆಂಟಲ್‍ಕಾಲೇಜು ಮತ್ತು ಆಸ್ಪತ್ರೆ, ವೈದ್ಯಕೀಯಕಾಲೇಜು, ನರ್ಸಿಂಗ್ ಕಾಲೇಜು ಮತ್ತು ಸಂಶೋಧನಾಕೇಂದ್ರವನ್ನು ಸೇರಿಸಿಕೊಂಡು ಎಸ್.ಡಿ.ಎಂ.ವೈದ್ಯಕೀಯ ವಿಶ್ವವಿದ್ಯಾಲಯ ಪ್ರಾರಂಭಿಸಲಾಗಿದೆ ಮುಂದೆ ಎಲ್ಲಾ ವಿದ್ಯಾಸಂಸ್ಥೆಗಳನ್ನು ವಿಶ್ವವಿದ್ಯಾಲಯಕ್ಕೆ ಸಂಯೋಜನೆ ಮಾಡಲಾಗುವುದು ಎಂದರು.

ಹೇಮಾವತಿ ವಿ. ಹೆಗ್ಗಡೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರಕುಮಾರ್ ಮತ್ತು ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.

ಎಸ್.ಡಿ.ಎಂ.ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಯೋಗ ವಿಭಾಗದ ಡೀನ್‍ಡಾ.ಶಿವಪ್ರಸಾದ ಶೆಟ್ಟಿಧನ್ಯವಾದವಿತ್ತರು.

ಅಂಕಿತ್ ಪಾಂಡೆ ಮತ್ತು ಪ್ರಿಯದಾ ಪಾಲ್‍ಶ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News