ಕಂದಾಯ ಇಲಾಖೆ ಕಾನೂನು ಸರಳೀಕರಣಕ್ಕೆ ಶಿಫಾರಸ್ಸು-ಐವನ್ ಡಿಸೋಜ

Update: 2019-06-11 17:53 GMT

ಪುತ್ತೂರು :ಕಂದಾಯ ಇಲಾಖೆಯ ಕೆಲವೊಂದು ಕಾನೂನುಗಳ ಸರಳೀಕರಣ ಮಾಡುವ ಹಾಗೂ ಅನುಷ್ಠಾನ ಮಾಡಲು ಆಗದಿರುವ ಕಾನೂನುಗಳನ್ನು ಕೈಬಿಡುವ ವಿಚಾರದಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದ್ದೇನೆ. ಮುಂದೆ ಬರುವ ಅಧಿವೇಶನದಲ್ಲಿ ಈ ಕುರಿತು ಸರ್ಕಾರಕ್ಕೆ ಸಲಹೆಗಳನ್ನು ನೀಡಲು ತೀರ್ಮಾನಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯರು, ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿಯಾಗಿರುವ ಐವಾನ್ ಡಿ'ಸೋಜ ಹೇಳಿದರು.

ಮಿನಿ ವಿಧಾನ ಸೌಧದಲ್ಲಿರುವ ಸಹಾಯಕ ಆಯುಕ್ತ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಕಂದಾಯ ಇಲಾಖೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ತಾನು ಇಲಾಖೆಯ ಎಲ್ಲಾ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿ, ಅನುಷ್ಠಾನಕ್ಕಿರುವ ತೊಂದರೆಗಳನ್ನು ತಿಳಿದುಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಉಳಿದಂತೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸವುದಾಗಿ ಅವರು ಹೇಳಿದದರು.

ಮಳೆಗಾಲ ಪ್ರಾರಂಭವಾಗಿದ್ದು ಪ್ರಾಕೃತಿಕ ವಿಕೋಪಗಳನ್ನು ತಡೆಯುವಲ್ಲಿ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸಿದ್ದವಾಗಿದೆ. ಸಂಭವಿಸಬಹುದಾದ ಹಾನಿಗಳಿಗೆ ಪರಿಹಾರ ನೀಡಲು ರೂ.27.81ಲಕ್ಷ ಖಾತೆಯಲ್ಲಿ ಜಮೆ ಇದ್ದು ಪರಿಹಾರ ವಿತರಿಸಲು ಹಣದ ಕೊರತೆಯಿಲ್ಲ. ಹೆಚ್ಚುವರಿ ಹಣ ಬಿಡುಗಡೆ ಮಾಡಲು ಸರಕಾರ ಬದ್ಧವಾಗಿದೆ. ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಜಿಲ್ಲಾಡಳಿತ ಹಾಗೂ ತಾಲೂಕು ಅಧಿಕಾರಿಗಳ ತಂಡ ಸನ್ನದ್ದವಾಗಿದೆ ಎಂದರು.

ಕೃಷಿ ಭೂಮಿ ಸಕ್ರಮೀಕರಣದಲ್ಲಿ ಇಗಾಗಲೇ ಪುತ್ತೂರು ತಾಲೂಕು ಒಂದರಲ್ಲಿಯೇ 67,069 ಎಕರೆ ಭೂಮಿಯನ್ನು ರೈತರಿಗೆ ಕೃಷಿಗಾಗಿ ನೀಡಲಾಗಿದೆ. ತಾಲೂಕಿನ 47 ಗ್ರಾಮಗಳ ಪೈಕಿ 38ರಲ್ಲಿ ಪೋಡಿಮುಕ್ತ ಅಭಿಯಾನ ಪೂರ್ಣಗೊಂಡಿದೆ. ಬಿಪಿಎಲ್ ಪಡಿತರ ಚೀಟಿ ವಿತರಣೆ, 94ಸಿ, 94ಸಿಸಿ ಅರ್ಜಿಗಳ ವಿಲೇವಾರಿಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದರು.

2010ರಲ್ಲಿ ಪ್ರಾರಂಭಗೊಂಡಿರುವ ಕಂದಾಯ ಅದಾಲತ್‍ನ ಮುಖಾಂತರ ಆರ್‍ಟಿಸಿಯಲ್ಲಿರುವ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಈಗಾಗಲೇ 97 ಕಂದಾಯ ಅದಾಲತ್‍ಗಳನ್ನು ನಡೆಸಲಾಗಿದೆ. ಇದರಲ್ಲಿ ಬಂದಿರುವ 3548 ಅರ್ಜಿಗಳನ್ನೂ ವಿಲೇವಾರಿ ಮಾಡುವ ಮೂಲಕ ಶೇ.100ರಷ್ಟು ಸಾಧಿಸಿದೆ. ಜನರಿಗೆ ಅತೀ ಆವಶ್ಯಕವಾದ ಪಿಂಚನಿ ಅದಾಲತ್‍ನ್ನು ಮುಂದಿನ ಜುಲೈ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ನಡೆಸಲಾಗುತ್ತಿದ್ದು ಅದರಲ್ಲಿ ನಾನು ಭಾಗವಹಿಸುವುದಾಗಿ ಐವನ್ ಹೇಳಿದರು.

ತಾಲೂಕಿನಲ್ಲಿ 782 ಮಂದಿಗೆ ವೃದ್ಧಾಪ್ಯ ವೇತನ, 5393 ಮಂದಿಗೆ ವಿಧವಾ ವೇತನ, 1274 ಮಂದಿ ಶೇ.40ರಷ್ಟು ಮತ್ತು 912 ಮಂದಿ ವಿಶೇಷ ಅಗತ್ಯವುಳ್ಳವರು, 5549 ಮಂದಿ ಸಂಧ್ಯಾ ಸುರಕ್ಷಾ, 627 ಮಂದಿ ಮನಸ್ವಿನಿ, 8ಮಂದಿ ಮೃತಪಟ್ಟ ರೈತರ ಪತ್ನಿಯರಿಗೆ ವಿಧವಾ ವೇತನ ಸೇರಿದಂತೆ ಒಟ್ಟು 14,501 ಮಂದಿ ಫಲಾನುಬವಿಗಳು ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿದ್ದಾರೆ. ಪಿಂಚಣಿ ಅದಾಲತ್‍ನಲ್ಲಿ 1052 ಅರ್ಜಿಗಳ ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಭೂ ಸ್ವಾಧೀನ ತಿದ್ದುಪಡಿ ಕಾಯಿದೆ ಬಗ್ಗೆ ರೈತರ ಪ್ರತಿಭಟನೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಐವನ್ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ರೈತ ವಿರೋಧಿಯಾಗಿಲ್ಲ. ನಮ್ಮದು ರೈತರ ಪರವಾಗಿರುವ ಸರಕಾರ. ರೈತರ ಸಾಲ ಮನ್ನಾ ಮಾಡಿರುವ ರಾಜ್ಯ ಸರ್ಕಾರ ರೈತರಿಗೆ ತೊಂದರೆ ಮಾಡುವುದಿಲ್ಲ. ರೈತರ ಭೂಮಿಯನ್ನು ಪಡೆದು ಕೈಗಾರಿಕೆಗಳಿಗೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ಈ ವಿಚಾರದಲ್ಲಿ ರೈತರು ಗೊಂದಲ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. 

ಸರ್ಕಾರಿ ಜಮೀನು ಪಡೆದುಕೊಂಡವರಿಗೆ 25 ವರ್ಷದ ಬಳಿಕ ಮಾರಾಟ ಮಾಡುವ ಅವಕಾಶ ಈಗಿನ ಕಾನೂನಿನಲ್ಲಿ ಇಲ್ಲ. ತಮ್ಮ ಕಷ್ಟ ಕಾಲದಲ್ಲಿ ಭೂಮಿ ಮಾರಾಟ ಮಾಡಲು ಸಾಧ್ಯವಾಗದ ಇದು ಸರಿಯಾದ ಕ್ರಮವಲ್ಲ ಎಂಬುವುದು ನನ್ನ ಭಾವನೆ ಎಂದ ಅವರು ಈ ವಿಚಾರದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಈ ಹಕ್ಕನ್ನು ಜಿಲ್ಲಾಧಿಕಾರಿಗೆ ಮತ್ತು ತಹಶೀಲ್ದಾರರಿಗೆ ಮತ್ತೆ ನೀಡಬೇಕೆಂಬ ವಿಚಾರದಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಉಪಸ್ಥಿತಿರಿದ್ದರು. 

ಹೊಸ ತಾಲೂಕುಗಳಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ

ರಾಜ್ಯದಲ್ಲಿ ಹೊಸದಾಗಿ ಆರಂಭಿಸಲಾದ ನೂತನ ತಾಲೂಕುಗಳಾದ ಕಡಬ, ಮುಲ್ಕಿ, ಮೂಡಬಿದ್ರೆ ಹಾಗೂ ಉಳ್ಳಾಲಗಳಿಗೆ ತಲಾ ರೂ.10 ಕೋಟಿ ವೆಚ್ಚದಲ್ಲಿ ಮಿನಿವಿಧಾನ ಸೌಧ ನಿರ್ಮಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ 6 ತಿಂಗಳೊಳಗಾಗಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ನಡೆಸಲು ಕ್ರಮಕೈಗೊಳ್ಳಲಾಗುವುದು. ಈ ತಾಲೂಕುಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ.
- ಐವನ್ ಡಿ.ಸೋಜಾ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News