ಬೈಕ್‌ಗಳ ಮೇಲಿನ ಭಾರತದ 50 ಶೇ. ತೆರಿಗೆ ಸ್ವೀಕಾರಾರ್ಹವಲ್ಲ: ಟ್ರಂಪ್

Update: 2019-06-11 18:04 GMT

 ವಾಶಿಂಗ್ಟನ್, ಜೂ. 11: ಅಮೆರಿಕದ ಮೋಟರ್‌ ಸೈಕಲ್‌ಗಳ ಮೇಲಿನ ಆಮದು ಸುಂಕವನ್ನು ಭಾರತ 100 ಶೇಕಡದಿಂದ 50 ಶೇಕಡಕ್ಕೆ ಇಳಿಸಿದ್ದರೂ, ಈಗಲೂ ಅದು ತೀರಾ ಅತಿಯಾಗಿಯೇ ಇದೆ ಹಾಗೂ ನನಗೆ ಅದು ಸ್ವೀಕಾರಾರ್ಹವಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನನ್ನ ನಾಯಕತ್ವದ ಅಮೆರಿಕವನ್ನು ಈಗ ಮೂರ್ಖನಾಗಿ ಮಾಡಲು ಸಾಧ್ಯವಿಲ್ಲ ಎಂಬುದಾಗಿಯೂ ಅವರು ಹೇಳಿದರು.

‘‘ಇಷ್ಟೊಂದು ಕೆಟ್ಟದಾಗಿ ನಿರ್ವಹಿಸಲು ನಮ್ಮದೇನೂ ಮೂರ್ಖರ ದೇಶವಲ್ಲ. ಭಾರತವನ್ನೊಮ್ಮೆ ನೋಡಿ. ಅಲ್ಲಿನ ಪ್ರಧಾನಿ (ನರೇಂದ್ರ) ಮೋದಿ ನನ್ನ ಅತ್ಯುತ್ತಮ ಸ್ನೇಹಿತ. ನೀವೊಮ್ಮೆ ಅವರು ಏನು ಮಾಡಿದ್ದಾರೆಂದು ನೋಡಿ. ಮೋಟರ್‌ ಸೈಕಲ್‌ಗಳ ಮೇಲೆ 100 ಶೇಕಡ ಆಮದು ತೆರಿಗೆ. ನಾವು ಅವರಿಗೆ ಏನೂ ತೆರಿಗೆ ವಿಧಿಸುವುದಿಲ್ಲ’’ ಎಂದು ಸೋಮವಾರ ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದರು.

ಟ್ರಂಪ್ ಹ್ಯಾರ್ಲೆ ಡೇವಿಡ್‌ಸನ್ ಮೋಟರ್‌ಸೈಕಲ್‌ಗಳ ಮೇಲೆ ಭಾರತ ವಿಧಿಸಿರುವ ಆಮದು ತೆರಿಗೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಈ ವಿಷಯವನ್ನು ಅವರು ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ ಹಾಗೂ ಈ ಬೈಕ್‌ಗಳ ಮೇಲಿನ ಆಮದು ಸುಂಕವನ್ನು ಭಾರತ ಶೂನ್ಯಕ್ಕೆ ಇಳಿಸಬೇಕೆಂದು ಬಯಸಿದ್ದಾರೆ.

‘‘ನಾನು ಪ್ರಧಾನಿ ಮೋದಿಗೆ ಫೋನ್ ಮಾಡಿದೆ ಹಾಗೂ ಇದು ಅಸ್ವೀಕಾರಾರ್ಹ ಎಂದು ಹೇಳಿದೆ. ನನ್ನ ಒಂದು ಫೋನ್ ಕರೆಗೆ ಅವರು (ಮೋದಿ) ಆಮದು ತೆರಿಗೆಯನ್ನು 50 ಶೇಕಡಕ್ಕೆ ಇಳಿಸಿದರು. ನಾನು ಹೇಳಿದೆ- ಅಮದು ತೆರಿಗೆ ಈಗಲೂ ಅಸ್ವೀಕಾರಾರ್ಹ. ಯಾಕೆಂದರೆ, ನಾವು ನಿಮ್ಮ ಬೈಕ್‌ಗಳಿಗೆ ಆಮದು ತೆರಿಗೆ ವಿಧಿಸುತ್ತಿಲ್ಲ. ಈಗ ಅವರು ಅದನ್ನು ಪರಿಶೀಲಿಸುತ್ತಿದ್ದಾರೆ’’ ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News