ಇನ್ನು ರಾಜಕೀಯ ವ್ಯಂಗ್ಯಚಿತ್ರ ಪ್ರಕಟಿಸುವುದಿಲ್ಲ; ‘ನ್ಯೂಯಾರ್ಕ್ ಟೈಮ್ಸ್’ ಪ್ರಕಟನೆ

Update: 2019-06-11 18:07 GMT

ವಾಶಿಂಗ್ಟನ್, ಜೂ. 11: ತನ್ನ ಅಂತರ್‌ರಾಷ್ಟ್ರೀಯ ಮುದ್ರಣದಲ್ಲಿ ಇನ್ನು ಪ್ರತಿನಿತ್ಯದ ರಾಜಕೀಯ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುವುದಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಪ್ರಕಟಿಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ವ್ಯಂಗ್ಯಚಿತ್ರವೊಂದವನ್ನು ಪ್ರಕಟಿಸಿರುವುದಕ್ಕಾಗಿ ಕ್ಷಮೆ ಕೋರಿದ ವಾರಗಳ ಬಳಿಕ ಪತ್ರಿಕೆಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ನೆತನ್ಯಾಹುರ ವ್ಯಂಗ್ಯಚಿತ್ರವನ್ನು ಯಹೂದಿ ವಿರೋಧಿ ಎಂಬುದಾಗಿ ಬಿಂಬಿಸಲಾಗಿತ್ತು.

ಎಪ್ರಿಲ್‌ನಲ್ಲಿ ಪ್ರಕಟಗೊಂಡ ವ್ಯಂಗ್ಯಚಿತ್ರದಲ್ಲಿ ನೆತನ್ಯಾಹುರನ್ನು ‘ಸ್ಟಾರ್ ಆಫ್ ಡೇವಿಡ್’ (ಇಸ್ರೇಲ್‌ನ ಚಿಹ್ನೆ) ಕಾಲರ್ ಧರಿಸಿದ ಮಾರ್ಗದರ್ಶಕ ನಾಯಿಯಾಗಿ, ‘ಕಿಪ್ಪಾ’ (ಯಹೂದಿಯರ ಟೊಪ್ಪಿ) ಧರಿಸಿದ ಅಂಧ ಡೊನಾಲ್ಡ್ ಟ್ರಂಪ್‌ರನ್ನು ಕರೆದೊಯ್ಯುವಂತೆ ಚಿತ್ರಿಸಲಾಗಿತ್ತು.

ಇದು ಯಹೂದಿ ಸಮುದಾಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ವಿಶ್ವಸಂಸ್ಥೆಗೆ ಇಸ್ರೇಲ್‌ನ ರಾಯಭಾರಿಯು ಈ ವ್ಯಂಗ್ಯಚಿತ್ರವನ್ನು ನಾಝಿಗಳ ಪ್ರಚಾರ ಪತ್ರಿಕೆ ‘ಡೆರ್ ಸ್ಟರ್ಮೆರ್’ನ ಬರಹಗಳಿಗೆ ಹೋಲಿಸಿದರು.

ಅಮೆರಿಕ ಮುದ್ರಣದ ಮಾದರಿಯಲ್ಲೇ, ನ್ಯೂಯಾರ್ಕ್ ಟೈಮ್ಸ್‌ನ ಅಂತರ್‌ರಾಷ್ಟ್ರೀಯ ಮುದ್ರಣದಲ್ಲೂ ರಾಜಕೀಯ ವ್ಯಂಗ್ಯಚಿತ್ರಗಳ ಪ್ರಕಟನೆಯನ್ನು ಒಂದು ವರ್ಷ ಅವಧಿಗೆ ನಿಲ್ಲಿಸಲು ಪತ್ರಿಕೆ ನಿರ್ಧರಿಸಿದೆ ಎಂದು ಸಂಪಾದಕ ಜೇಮ್ಸ್ ಬೆನೆಟ್ ಹೇಳಿದ್ದಾರೆ.

ಈ ನಿರ್ಧಾರವು ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಸೋಮವಾರ ನೀಡಿದ ಹೇಳಿಕೆಯೊಂದರಲ್ಲಿ ಬೆನೆಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News