ಹತ ಕಿಮ್ ಜಾಂಗ್ ನಾಮ್ ಸಿಐಎಯ ಮಾಹಿತಿದಾರನಾಗಿದ್ದರು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ

Update: 2019-06-11 18:11 GMT

ವಾಶಿಂಗ್ಟನ್, ಜೂ. 11: ಮಲೇಶ್ಯದಲ್ಲಿ 2017ರಲ್ಲಿ ಹತ್ಯೆಯಾದ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್‌ರ ಮಲಸಹೋದರ ಕಿಮ್ ಜಾಂಗ್ ನಾಮ್ ಅಮೆರಿಕದ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟಲಿಜನ್ಸ್ ಏಜನ್ಸಿ (ಸಿಐಎ)ಯ ಮಾಹಿತಿದಾರನಾಗಿದ್ದರು ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಸೋಮವಾರ ವರದಿ ಮಾಡಿದೆ.

ಈ ವಿಷಯದಲ್ಲಿ ಮಾಹಿತಿ ಹೊಂದಿರುವ ಅನಾಮಧೇಯ ವ್ಯಕ್ತಿಯೊಬ್ಬರನ್ನು ಉಲ್ಲೇಖಿಸಿ ಪತ್ರಿಕೆ ಈ ವರದಿ ಮಾಡಿದೆ ಹಾಗೂ ಸಿಐಎ ಜೊತೆಗಿನ ಕಿಮ್ ಜಾಂಗ್ ನಾಮ್‌ರ ಸಂಬಂಧದ ಹೆಚ್ಚಿನ ವಿವರಗಳು ಸ್ಪಷ್ಟವಾಗಿಲ್ಲ ಎಂದು ಅದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ‘ರಾಯ್ಟರ್ಸ್’ ಸಿಐಎಯನ್ನು ಸಂಪರ್ಕಿಸಿದಾಗ ಅದು ಪ್ರತಿಕ್ರಿಯಿಸಲು ನಿರಾಕರಿಸಿದೆ.

‘‘ನಾಮ್ ಹಲವು ವರ್ಷಗಳಿಂದ ಉತ್ತರ ಕೊರಿಯದಿಂದ ಹೊರಗೆ ವಾಸಿಸುತ್ತಿದ್ದಾರೆ ಹಾಗೂ ಅವರಿಗೆ ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ಗೊತ್ತಿರುವ ಸಂಪರ್ಕಗಳೂ ಇಲ್ಲ. ಹಾಗಾಗಿ ಉತ್ತರ ಕೊರಿಯದ ಒಳಗಿನ ವಿಷಯಗಳ ಬಗ್ಗೆ ವಿವರಗಳನ್ನು ನೀಡುವ ಸ್ಥಿತಿಯಲ್ಲಿ ಅವರಿರಲು ಸಾಧ್ಯವಿಲ್ಲ ಎಂಬುದಾಗಿ ಅಮೆರಿಕದ ಹಲವಾರು ಮಾಜಿ ಅಧಿಕಾರಿಗಳು ಹೇಳಿದ್ದಾರೆ’’ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಹೇಳಿದೆ.

ಆದಾಗ್ಯೂ, ನಾಮ್ ಖಂಡಿತವಾಗಿಯೂ ಇತರ ದೇಶಗಳ, ಅದರಲ್ಲೂ ಮುಖ್ಯವಾಗಿ ಚೀನಾದ ಭದ್ರತಾ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದರು ಎಂಬುದಾಗಿಯೂ ಈ ಅಧಿಕಾರಿಗಳು ಹೇಳಿದ್ದಾರೆ ಎಂದು ಪತ್ರಿಕೆ ಬರೆದಿದೆ.

ಕಿಮ್ ಜಾಂಗ್ ನಾಮ್ ಹತ್ಯೆಗೆ ಉತ್ತರ ಕೊರಿಯದ ಅಧಿಕಾರಿಗಳು ಆದೇಶ ನೀಡಿದ್ದರು ಎಂಬುದಾಗಿ ದಕ್ಷಿಣ ಕೊರಿಯ ಮತ್ತು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News