ವಲಸೆ ಕಾರ್ಮಿಕರ ಮಕ್ಕಳಿಗೆ ಸಹಾಯವಾಣಿ ಅವಶ್ಯಕ: ಸಿ.ಎಂ.ಜೋಶಿ

Update: 2019-06-12 14:00 GMT

ಉಡುಪಿ, ಜೂ.12: ಉಡುಪಿ ಜಿಲ್ಲೆಯವರಿಗಿಂತ ಹೊರಗಿನಿಂದ ಬಂದು ಇಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ಕುಟುಂಬಗಳಿಗೆ ಮಕ್ಕಳ ಸಹಾಯವಾಣಿ ಅತಿ ಅವಶ್ಯಕವಾಗಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಾಧೀಶ ಸಿ.ಎಂ.ಜೋಶಿ ಹೇಳಿದ್ದಾರೆ.

ಚೈಲ್ಡ್ಲೈನ್ ಇಂಡಿಯಾ ಫೌಂಡೇಶನ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನ ದಲ್ಲಿ ಬುಧವಾರ ಆಯೋಜಿಸಲಾದ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಿಗೆ ತರ ಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆರ್ಥಿಕ ಸಮಸ್ಯೆಗಳಿಂದ ಭಿಕ್ಷಾಟನೆಗಾಗಿ ಮಕ್ಕಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುವುದು ಮತ್ತು ಮಕ್ಕಳನ್ನು ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು ವಲಸೆ ಕಾರ್ಮಿಕರಲ್ಲಿ ಕಂಡುಬರುತ್ತಿವೆ. ಆದುದರಿಂದ ಇವರ ಮಕ್ಕಳಿಗೆ ಸಹಾಯ ವಾಣಿಯು ಬಳಷ್ಟು ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಲೇಲೆ ಮಾತನಾಡಿ, ದೇಶ ಅಭಿವೃದ್ಧಿ ಪಥದಲ್ಲಿ ಬೆಳೆಯಬೇಕಾದರೆ ಮಕ್ಕಳು ಬೆಳೆಯಬೇಕು. ಮಕ್ಕಳನ್ನು ಸರಿಯಾಗಿ ಸಾಕಿ ಸಲಹದಿದ್ದರೆ ಇಡೀ ವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳಿಗೆ ಎಳೆ ವಯಸ್ಸಿನಲ್ಲಿ ಸರಿಯಾದ ರಕ್ಷಣೆ ಕೊಡಬೇಕು. ಇಲ್ಲದಿದ್ದರೆ ಅವರ ಇಡೀ ಬಾಲ್ಯವನ್ನೇ ಕಸಿದುಕೊಂಡ ತ್ತಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್ ಮಾತನಾಡಿ, ಜಿಲ್ಲೆಯ ಮಕ್ಕಳ ಸಹಾಯವಾಣಿಗೆ ಭಿಕ್ಷಾಟನೆ, ಬಾಲ್ಯವಿವಾಹ, ದೌರ್ಜನ್ಯ, ಲೈಂಗಿಕ ದೌರ್ಜನ್ಯ ಕುರಿತು ಒಟ್ಟು 23 ಕರೆಗಳು ಬಂದಿದ್ದು, ಈ ಎಲ್ಲಾ ಕರೆಗಳ ಬಗ್ಗೆ ಸೂಕ್ತ ಕ್ರಮ ಜರಗಿಸಲಾಗಿದೆ. ಮಕ್ಕಳ ದೌರ್ಜನ್ಯ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ಜೊತೆ ಶಿಶು ಅಭಿವೃದ್ಧಿ, ಮಕ್ಕಳ ಕಲ್ಯಾಣ ಇಲಾಖೆ, ಬಾಲಾಪರಾಧಿ ನ್ಯಾಯಾಲಯ ಇಲಾಖೆಗಳ ಪಾಲ್ಗೊಂಡಾಗ ಮಾತ್ರ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮಾತ ನಾಡಿ, ಮಕ್ಕಳ ಹಕ್ಕುಗಳನ್ನು ಗಮನಿಸುವ ಜೊತೆಗೆ ಮಕ್ಕಳನ್ನು ಗೌರವಯುತವಾಗಿ ಬದುಕಲು ಬಿಡಬೇಕು. ಮಕ್ಕಳು ದೌರ್ಜನ್ಯಕ್ಕೆ ಒಳಗಾದಾಗ ಸಮಾಜಕ್ಕೆ ಮಾರಕ ವಾಗಿ ಬೆಳೆಯುವ ಸಾಧ್ಯತೆಗಳಿರುತ್ತದೆ. ಹಾಗಾಗಿ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸಲಹೆ ನೀಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ನಮ್ಮ ಭೂಮಿಯ ಪ್ರತಿಭೆ ರಾಮಾಂಜಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ನಾರಾಯಣ ಬಿ.ಕೆ. ಉಪಸ್ಥಿತರಿದ್ದರು.

ಚೈಲ್ಡ್ ಇಂಡಿಯಾ ಫೌಂಡೇಶನ್‌ನ ಚೆನ್ನೈ ಪ್ರಾದೇಶಿಕ ಮುಖ್ಯ ಸಂಯೋಜ ನಾಧಿಕಾರಿ ಚಿತ್ರಾ ಆಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಚೈಲ್ಡ್ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಯ್ಯಪ್ಪನ್ ವಂದಿಸಿದರು.

ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ 29 ಜಿಲ್ಲೆಗಳಲ್ಲಿ ಮಕ್ಕಳ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿರುವ ಮಕ್ಕಳ ಸಹಾಯವಾಣಿಗೆ ಬಾಲ ಕಾರ್ಮಿಕರಿಂದ ಸುಮಾರು 2500ಕ್ಕೂ ಅಧಿಕ ದೂರಿನ ಕರೆಗಳು ಬಂದಿವೆ. ಈ ಮೂಲಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ದುಡಿಮೆಯಲ್ಲಿ ತೊಡಗಿ ರುವುದು ಸ್ಪಷ್ಟವಾಗುತ್ತದೆ. ಅಂತಹ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆತರುವ ಕೆಲಸ ಆಗಬೇಕಾಗಿದೆ ಎಂದು ಚೈಲ್ಡ್ ಇಂಡಿಯಾ ಫೌಂಡೇಶನ್‌ನ ಚೆನ್ನೈ ಪ್ರಾದೇಶಿಕ ಮುಖ್ಯ ಸಂಯೋಜ ನಾಧಿಕಾರಿ ಚಿತ್ರಾ ಆಂಚನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News