ದುರ್ಬಲ ಮುಂಗಾರು: ಉಡುಪಿ ಜಿಲ್ಲೆಯಲ್ಲಿ ನೀಗದ ನೀರಿನ ಸಮಸ್ಯೆ

Update: 2019-06-12 16:21 GMT

ಉಡುಪಿ, ಜೂ.12: ರಾಜ್ಯ ಕರಾವಳಿ ಭಾಗದ ಜನರ ಹರಕೆ- ಹಾರೈಕೆ- ಪೂಜೆಯ ನಡುವೆ ಎಂಟು ದಿನ ತಡವಾಗಿ ಕರಾವಳಿಗೆ ಮುಂಗಾರು ಕಾಲಿಡುತಿದ್ದಂತೆ ಅರಬಿಸಮುದ್ರದಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತ ಹಾಗೂ ಅದರಿಂದ ಉಂಟಾದ ‘ವಾಯು’ ಚಂಡಮಾರುತದ ಪ್ರಭಾವದಿಂದಾಗಿ ಉಡುಪಿ ಜಿಲ್ಲೆಯ ಮಟ್ಟಿಗಂತೂ ಸದ್ಯಕ್ಕೆ ಮುಂಗಾರು ದುರ್ಬಲಗೊಂಡಿದೆ.

ದಿನವಿಡೀ ರಭಸದಿಂದ ಸುರಿಯಬೇಕಿದ್ದ ಮಳೆ ಆಗಾಗ ಸಾಧಾರಣವಾಗಿ ಸುರಿಯುತಿದ್ದು, ಇದರಿಂದ ಕಳೆದೊಂದು ತಿಂಗಳಿನಿಂದ ಜಿಲ್ಲೆಯನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಪರಿಹಾರ ದೊರಕಿಲ್ಲ. ಜಿಲ್ಲೆಯ ಹೆಚ್ಚಿನ ಮನೆಗಳಲ್ಲಿರುವ ಬಾವಿಗಳಲ್ಲಿ ನೀರು ಬಂದಿಲ್ಲ. ಕೆರೆ, ಹೊಳೆ, ಹಳ್ಳಗೂ ಇನ್ನೂ ಬರಿದಾಗಿಯೇ ಉಳಿದುಕೊಂಡಿದೆ.

ಸಾಂಪ್ರದಾಯಿಕವಾಗಿ ಮಳೆಗಾಲ ಪ್ರಾರಂಭಗೊಂಡು ಇಂದಿಗೆ 12 ದಿನಗಳಾಗಬೇಕಿತ್ತು. ಆದರೆ ಜಿಲ್ಲೆಯಲ್ಲಿ ಇನ್ನೂ ಮಳೆಗಾಲದ ವಾತಾವರಣ ಕಂಡುಬರುತ್ತಿಲ್ಲ. ಉಡುಪಿ ನಗರಕ್ಕೆ ನೀರನ್ನು ಪೂರೈಸುವ ಬಜೆಯ ಸ್ವರ್ಣ ನದಿಯಲ್ಲಿ ಇನ್ನೂ ನೀರಿನ ಹರಿವು ಪ್ರಾರಂಭಗೊಂಡಿಲ್ಲ. ಹೀಗಾಗಿ ಅಲ್ಲಲ್ಲಿ ಗುಂಡಿಯಲ್ಲಿರುವ ನೀರನ್ನು ಈಗಲೂ ಪಂಪಿಂಗ್ ಮಾಡಿ ನಗರಕ್ಕೆ ನೀರು ಪೂರೈಸುವ ಪ್ರಯತ್ನ ನಡೆಯುತ್ತಿದೆ.

ಸಿಡಿಲಿಗೆ ಮನೆ ಹಾನಿ

ಮಂಗಳವಾರ ರಾತ್ರಿ ಕಾರ್ಕಳ ತಾಲೂಕು ನಿಟ್ಟೆ ಗ್ರಾಪಂ ವ್ಯಾಪ್ತಿಯ ಬೋರ್ಗಲಗುಡ್ಡೆ ಎಂಬಲ್ಲಿ ಸಿಡಿಲು ಬಡಿದು ಅಲಿಯಬ್ಬ ಎಂಬವರ ಮನೆ ಭಾಗಶ: ಹಾನಿಗೊಂಡಿದೆ. ಸಿಡಿಲಿನಿಂದಾಗಿ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಮನೆಯಲ್ಲಿರುವ ವಿದ್ಯುತ್ ಉಪಕರಣಗಳು ಹಾನಿಗೊಂಡಿವೆ. ಇದರಿಂದ ಸುಮಾರು 20,000ರೂ.ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿಯಿಂದ ತಿಳಿದುಬಂದಿದೆ.

ಮನೆ ಹಾನಿ:

ಕುಂದಾಪುರ ತಾಲೂಕು ಆಲೂರು ಗ್ರಾಮದ ಕಮಲ ಆಚಾರ್ತಿ ಎಂಬವರ ವಾಸದ ಪಕ್ಕಾ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದ್ದು, 20,000ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಜಿಲ್ಲೆಯಲ್ಲಿ 29 ಮಿ.ಮೀ.ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 29ಮಿ. ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 24.5ಮಿ.ಮೀ., ಕುಂದಾಪುರ ದಲ್ಲಿ 28.0ಮಿ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 34.4ಮಿ.ಮೀ. ಮಳೆ ಸುರಿದ ಬಗ್ಗೆ ವರದಿಯಾಗಿದೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 29ಮಿ. ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 24.5ಮಿ.ಮೀ., ಕುಂದಾಪುರ ದಲ್ಲಿ 28.0ಮಿ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 34.4ಮಿ.ಮೀ. ಮಳೆ ಸುರಿದ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News