ಮಕ್ಕಳು ಕಾರ್ಮಿಕರಾಗಿ ದುಡಿಯುವುದು ಅಪರಾಧ: ಪ್ರಭಾಕರ ಆಚಾರ್ಯ

Update: 2019-06-12 16:29 GMT

ಉಡುಪಿ, ಜೂ.12: ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಕುರಿತು ಮಾಹಿತಿ ಕಾರ್ಯಾಗಾರವು ವಡ್ಡರ್ಸೆ ಸರಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ನಡೆಯಿತು.

ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಉಪನ್ಯಾಸ ನೀಡಿ, 14 ವರ್ಷದ ಮಕ್ಕಳು ಇಂದು ವಿವಿಧ ಕ್ಷೇತ್ರದಲ್ಲಿ ಕಾರ್ಮಿಕರಾಗಿ ನಾನಾ ಕಾರಣದಿಂದ ದುಡಿಯುತ್ತಿರುವುದು ಆಘಾತಕಾರಿ ವಿಷಯವಾಗಿದೆ. ವಿಶ್ವಮಟ್ಟದಲ್ಲಿ ಎಲ್ಲಾ ರಾಷ್ಟ್ರಗಳು ಜಾಗೃತ ಕಾರ್ಯಕ್ರುಗಳನ್ನು ನಡೆಸುತ್ತಿವೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪ್ರಕರಣಗಳು ಗಣನೀಯ ಪ್ರಮಾಣ ದಲ್ಲಿ ಇಳಿಮುಖವಾಗಿರುವುದು ಸಂತೋಷದ ವಿಷಯವೆಂದು ತಿಳಿಸಿದ ಅವರು ಬಾಲಕಾರ್ಮಿಕರು ಮತ್ತು ಕಿಶೋರ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವಡ್ಡರ್ಸೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿ ಕೆ. ಮಾತನಾಡಿ, ಬಾಲಕಾರ್ಮಿಕರಾಗಿ ದುಡಿಯುವ ಮಕ್ಕಳ ಬಾಲ್ಯ ತೀವ್ರವಾದ ಶೆಷಣೆಗೆ ಒಳಗಾಗುತ್ತದೆ ಎಂದರು.

ಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಸಹ ಶಿಕ್ಷಕ ಆನಂದ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚುನಾವಣಾ ಸಾಕ್ಷರತಾ ಕ್ಲಬ್‌ನ ಅಧ್ಯಕ್ಷ ಸುಮಂತ ವಂದಿಸಿ ವರ್ಷ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News