ನೀವು ವಾರಕ್ಕೆ ಕ್ರೆಡಿಟ್ ಕಾರ್ಡ್‌ನಷ್ಟು ಗಾತ್ರದ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ!

Update: 2019-06-12 17:29 GMT

 ಜಿನೇವ (ಸ್ವಿಟ್ಸರ್‌ಲ್ಯಾಂಡ್), ಜೂ. 12: ಪರಿಸರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಎಷ್ಟು ಹಾಸುಹೊಕ್ಕಾಗಿದೆಯೆಂದರೆ, ವಾರವೊಂದಕ್ಕೆ ನೀವು ಕನಿಷ್ಠ 5 ಗ್ರಾಮ್‌ನಷ್ಟು ಪ್ಲಾಸ್ಟಿಕನ್ನು, ಅಂದರೆ ಒಂದು ಕ್ರೆಡಿಟ್ ಕಾರ್ಡ್‌ನಷ್ಟು ಗಾತ್ರದ ಪ್ಲಾಸ್ಟಿಕನ್ನು ತಿಂದು ತೇಗುತ್ತೀರಿ ಎಂದು ಪರಿಸರ ಸಂಘಟನೆ ‘ಡಬ್ಲ್ಯುಡಬ್ಲ್ಯುಎಫ್ ಇಂಟರ್‌ನ್ಯಾಶನಲ್’ ಪ್ರೇರಿತ ಅಧ್ಯಯನವೊಂದು ಬುಧವಾರ ಹೇಳಿದೆ.

ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಮಾನವ ದೇಹದ ಒಳಗೆ ಹೋಗುವುದು ಕುಡಿಯುವ ನೀರಿನ ಮೂಲಕ ಎಂಬುದಾಗಿ ಆಸ್ಟ್ರೇಲಿಯದ ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯ ನಡೆಸಿರುವ ಅಧ್ಯಯನ ತಿಳಿಸಿದೆ. ಅದೇ ವೇಳೆ, ಮಾನವ ದೇಹದೊಳಗೆ ಹೋಗುವ ಇನ್ನೊಂದು ಪ್ರಮುಖ ಪ್ಲಾಸ್ಟಿಕ್ ಮೂಲವೆಂದರೆ ಮರುವಾಯಿ ಮುಂತಾದ ಚಿಪ್ಪು ಮೀನುಗಳು. ಅವುಗಳ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಪ್ಲಾಸ್ಟಿಕ್ ಮಾನವರ ದೇಹಗಳಿಗೂ ಹೋಗುತ್ತದೆ.

‘‘2000ದ ಬಳಿಕ, ಅದರ ಹಿಂದಿನ ಎಲ್ಲಾ ವರ್ಷಗಳಲ್ಲಿ ಉತ್ಪಾದನೆಯಾಗಿರುವಷ್ಟೇ ಪ್ರಮಾಣದ ಪ್ಲಾಸ್ಟಿಕ್ ಜಗತ್ತಿನಲ್ಲಿ ಉತ್ಪಾದನೆಯಾಗಿದೆ’’ ಎಂದು ವರದಿ ತಿಳಿಸಿದೆ.

ಓರ್ವ ಸಾಮಾನ್ಯ ಮನುಷ್ಯ ಪ್ರತಿ ವಾರ ನೀರೊಂದರಿಂದಲೇ 1,769 ಕಣಗಳಷ್ಟು ಪ್ಲಾಸ್ಟಿಕನ್ನು ಸೇವಿಸುತ್ತಿರಬಹುದು ಎಂದಿದೆ.

ಯುರೋಪ್‌ನಲ್ಲಿ ಮಾಲಿನ್ಯ ಕಡಿಮೆ

ಪ್ಲಾಸ್ಟಿಕ್ ಮಾಲಿನ್ಯದ ಪ್ರಮಾಣ ಸ್ಥಳದಿಂದ ಸ್ಥಳಕ್ಕೆ ಬದಲಾಗಬಹುದು, ಆದರೆ ಈ ಮಾಲಿನ್ಯದಿಂದ ಯಾವ ಸ್ಥಳವೂ ಮುಕ್ತವಾಗಿಲ್ಲ ಎಂದು ಹೇಳಿದೆ.

ಅಮೆರಿಕದಲ್ಲಿ, 94.4 ಶೇಕಡ ನಳ್ಳಿ ನೀರಿನ ಮಾದರಿಗಳಲ್ಲಿ ಪ್ಲಾಸ್ಟಿಕ್ ಫೈಬರ್‌ಗಳು ಪತ್ತೆಯಾಗಿವೆ. ಇದರ ಸರಾಸರಿ ಪ್ರಮಾಣ ಲೀಟರ್‌ಗೆ 9.6 ಫೈಬರ್‌ಗಳು. ಇದಕ್ಕೆ ಹೋಲಿಸಿದರೆ, ಯುರೋಪ್‌ನ ನೀರು ಕಡಿಮೆ ಕಲುಷಿತಗೊಂಡಿದೆ. ಅಲ್ಲಿನ 72.2 ಶೇಕಡ ನೀರಿನ ಮಾದರಿಗಳಲ್ಲಿ ಮಾತ್ರ ಲೀಟರ್‌ಗೆ 3.8 ಫೈಬರ್‌ಗಳಂತೆ ಪ್ಲಾಸ್ಟಿಕ್ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News