ವಿದ್ಯುತ್ ಅವಘಡಕ್ಕೆ ತಂದೆ-ಮಗಳು ಮೃತ್ಯು: ಪಿಲಿಮೊಗರು ಗ್ರಾಮದಲ್ಲಿ ನೀರವ ಮೌನ

Update: 2019-06-12 17:14 GMT

ಬಂಟ್ವಾಳ, ಜೂ. 12: ಗಾಳಿ ಮಳೆಯಿಂದ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ತುಳಿದು ಸಾವನ್ನಪ್ಪಿದ್ದ ಬಂಟ್ವಾಳ ತಾಲೂಕಿನ ಪಿಲಿಮೊಗರು ಗ್ರಾಮದ ಬಾರೆಕ್ಕಿನಡಿಯ ತಂದೆ, ಮಗಳ ಅಂತಿಮ ಸಂಸ್ಕಾರ ಬುಧವಾರ ಸಂಜೆ ಬಾರೆಕ್ಕಿನಡಿಯಲ್ಲಿ ನಡೆಯಿತು. ಘಟನೆಯಿಂದ ಗ್ರಾಮದಲ್ಲಿ ಮಾತು ಮರೆತು ಹೋಗಿ ನೀರವ ಮೌನ ಆವರಿಸಿದ್ದು, ಅಂತ್ಯ ಸಂಸ್ಕಾರದ ವೇಳೆಗೆ ಇಡೀ ಗ್ರಾಮವೇ ಸೇರಿತ್ತು. 

ಮಂಗಳವಾರ ಸಂಜೆ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದ ಗೋಪಾಲಕೃಷ್ಣ ಶೆಟ್ಟಿ ಅವರು ತೋಟದಲ್ಲಿ ಕಡಿದು ಬಿದ್ದಿದ್ದ ಹಳೆಯ ವಿದ್ಯುತ್ ತಂತಿಯನ್ನು ಆಕಸ್ಮಿಕ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು. ತಂದೆಯನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಪುತ್ರಿ ದಿವ್ಯಶ್ರೀ ಅವರಿಗೂ ವಿದ್ಯುತ್ ತಂತಿ ತಗಲಿ ಅವರೂ ಮೃತ ಪಟ್ಟಿದ್ದರು.

ಬುಧವಾರ ಮೃತರ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಮನೆಯಲ್ಲಿ ವಿಧಿವಿಧಾನಗಳು ಪೂರೈಸಿದ ಬಳಿಕ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಘಟನೆಯಿಂದ ಆಘಾತಕ್ಕೊಳಗಾಗಿದ್ದ ಗೋಪಾಲಕೃಷ್ಣ ಶೆಟ್ಟಿ ಅವರ ಪತ್ನಿ ಗಿರಿಜಾ ಶೆಟ್ಟಿ ಅವರನ್ನು ಪತಿ, ಪುತ್ರಿಯ ಅಂತ್ಯ ಸಂಸ್ಕಾರದ ಹಿನ್ನೆಲೆಯಲ್ಲಿ ಮನೆಗೆ ಕರೆತರಲಾಗಿದೆ. 

ಈ ಸಂದರ್ಭದಲ್ಲಿ ಮೃತರಿಗೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಆವರು ಘಟನೆಯ ಬಗ್ಗೆ ಮೆಸ್ಕಾಂನ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡರಲ್ಲದೆ, ಮೃತರ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರವನ್ನು ನೀಡುವಂತೆ ಸೂಚಿಸಿದರು.

ವಿಧಾನ ಪರಿಷತ್‍ನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ, ತಾಪಂ ಸದಸ್ಯೆ ರತ್ನಾವತಿ ಜೆ.ಶೆಟ್ಟಿ, ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ಜಿ.ಆನಂದ, ಸುಲೋಚನಾ ಜಿ.ಕೆ.ಭಟ್, ರಾಮದಾಸ ಬಂಟ್ವಾಳ ಹಾಗೂ ಪಕ್ಷದ ಸ್ಥಳೀಯ ಮುಖಂಡರು ಮತ್ತು ಗ್ರಾಪಂ ಅಧ್ಯಕ್ಷ ಯತೀಶ್ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್‍ಚಂದ್ರ ಶೆಟ್ಟಿ  ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.

ಅಂತ್ಯ ಸಂಸ್ಕಾರದ ವೇಳೆ ಮೆಸ್ಕಾಂನ ಹಿರಿಯ ಅಧಿಕಾರಿಗಳ ಸಹಿತ ಹಲವಾರು ಗಣ್ಯರು, ರಾಜಕೀಯ ಮುಖಂಡರು ಉಪಸ್ಥಿತರಿದ್ದರು.

ದೂರು ದಾಖಲು: ಘಟನೆಯ ಬಗ್ಗೆ ಮೃತರ ಸಂಬಂಧಿ ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡಿ ಅವರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕಳೆದ 40 ವರ್ಷದಿಂದ ಮೆಸ್ಕಾಂ ವಿದ್ಯುತ್ ಸಂಪರ್ಕದ ತಂತಿಯನ್ನು ಬದಲಿಸದೆ ನಿರ್ಲಕ್ಷ್ಯ ವಹಿಸಿರುವುದೇ ಈ ಅವಘಡಕ್ಕೆ ಕಾರಣವೆಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News