ಉಡುಪಿ ಜಿಲ್ಲೆಯಲ್ಲಿ ಬಿರುಸು ಪಡೆಯುತ್ತಿರುವ ಮುಂಗಾರು

Update: 2019-06-12 17:21 GMT

ಉಡುಪಿ, ಜೂ.12: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ತೀರಾ ದುರ್ಬಲವಾಗಿದ್ದ ಮುಂಗಾರು ಇಂದು ಸಂಜೆಯ ಬಳಿಕ ಬಿರುಸು ಪಡೆದು ಕೊಂಡಿದ್ದು, ಇದರಿಂದ ಒಂದೆರಡು ದಿನಗಳಲ್ಲಿ ಜಿಲ್ಲೆಯನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಸಾಧ್ಯತೆ ಕಂಡುಬಂದಿದೆ.

ಸಂಜೆ 4ಗಂಟೆಯವರೆಗೆ ಬಿಟ್ಟು ಬಿಟ್ಟು ಆಗಾಗ ಸುರಿಯುತಿದ್ದ ಮಳೆ, ಆ ಬಳಿಕ ಬಿರುಸನ್ನು ಪಡೆದಿದ್ದು ಮಿಂಚು ಹಾಗೂ ಗುಡುಗಿನೊಂದಿಗೆ ಜೋರಾಗಿ ಸುರಿಯುತ್ತಿದೆ. ಇದರಿಂದ ಒಳಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದ ಕಡೆ ನೀರು ರಸ್ತೆಯ ಮೇಲೆಯೇ ಸುರಿಯುತ್ತಿದೆ. ಇದರಿಂದ ನಗರದ ಅಲ್ಲಲ್ಲಿ ಕೃತಕ ನೆರೆಯ ಭೀತಿ ಎದುರಾಗಿದೆ. ಮಳೆ ರಾತ್ರಿ ಇಡೀ ಇದೇ ರೀತಿ ಮುಂದುವರಿದರೆ ತಗ್ಗು ಪ್ರದೇಶಗಳೆಲ್ಲವೂ ನೀರಿನಿಂದ ಆವೃತ್ತವಾಗುವ ಸಾದ್ಯತೆ ಇದೆ.

ಉರುಳಿದ ಕಂಟೈನರ್: ಬೈಂದೂರು ಸಮೀಪದ ಶಿರೂರು ಸಂಕದಗುಂಡಿ ಬಳಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಕಂಟೈನರ್ ಒಂದು ನಿಯಂತ್ರಣ ಕಳೆದುಕೊಂಡು ರಸ್ತೆಗುರುಳಿದೆ. ಕಂಟೈನರ್ ಭಟ್ಕಳದಿಂದ ಕುಂದಾಪುರದತ್ತ ತೆರಳುತಿದ್ದಾಗ ಈ ದುರ್ಘಟನೆ ನಡೆದಿದೆ.
ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಲಾರಿಯ ಮುಂಭಾಗ ರಸ್ತೆಗೆ ತಿರುಚಿ ಬಿದ್ದಿದೆ. ಆದರೆ ಅದರ ಚಾಲಕ ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಂದಿದೆ.

ಕಡಲು ಪ್ರಕ್ಷುಬ್ಧ: ಉದ್ಯಾವರ ಗ್ರಾಪಂ ವ್ಯಾಪ್ತಿಯ ಪಡುಕೆರೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ನೀರು ರಸ್ತೆಯನ್ನು ದಾಟಿ ಬರುತಿದ್ದು, ಪಕ್ಕದ ಮನೆಯ ಅಂಗಳವನ್ನು ಹಾದು ನದಿಯನ್ನು ಸೇರತೊಡಗಿದೆ. ಮಾಹಿತಿ ತಿಳಿದು ಉಡುಪಿ ಜಿಪಂ ಅಧ್ಯಕ್ಷ ದಿವಾಕರಬಾಬು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. ಈ ಬಗ್ಗೆ ತುರ್ತಾಗಿ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News