ಕುವೈತ್ ಅತಂತ್ರರು ವಾಪಸಾತಿಗೆ 10 ದಿನ ವಿಳಂಬ

Update: 2019-06-12 17:38 GMT

ಮಂಗಳೂರು, ಜೂ.12: ಉದ್ಯೋಗ ವಂಚನೆಗೆ ಒಳಗಾಗಿ ಕುವೈತ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಮಂಗಳೂರಿಗರು ಸೇರಿದಂತೆ 72 ಮಂದಿ ಭಾರತೀಯ ನೌಕರರ ಬಿಡುಗಡೆ ಪ್ರಯತ್ನ ಇನ್ನೂ 10 ದಿನಗಳ ಕಾಲ ವಿಳಂಬವಾಗುವ ಸಾಧ್ಯತೆ ಇದೆ.

ಕುವೈಟ್‌ನ ಕಾರ್ಮಿಕರ ಪರವಾದ ನ್ಯಾಯಾಲಯ ವ್ಯವಸ್ಥೆಯಾದ ಶೋನ್ ಹಾಗೂ ಕುವೈಟ್‌ನ ಸಚಿವಾಲಯ ಮಟ್ಟದ ಪಾಮ್(ಪಬ್ಲಿಕ್ ಅಥಾರಿಟಿ ಆಫ್ ಮ್ಯಾನ್‌ಪವರ್) ಬುಧವಾರ ನಡೆಸಬೇಕಾಗಿದ್ದ ಸಂತ್ರಸ್ತರ ಅಹವಾಲು ಸಭೆಯನ್ನು ಮತ್ತೆ ಮುಂದೂಡಿದೆ. ಆದರೆ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಪಾಮ್ ಅಧಿಕಾರಿಗಳು ದೂರವಾಣಿ ಮಾತುಕತೆ ನಡೆಸಿದ್ದಾರೆ. ಆದರೆ ಸಂತ್ರಸ್ತ ನೌಕರರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ.

ದಾಖಲಾಗದ ದೂರು: ಉದ್ಯೋಗ ನೀಡಿದ ಕಂಪೆನಿಯಿಂದ ವಂಚನೆಗೆ ಒಳಗಾದ ಭಾರತೀಯ ಸಂತ್ರಸ್ತ ನೌಕರರು ಶೋನ್‌ಗೆ ಲಿಖಿತವಾಗಿ ದೂರು ನೀಡಿದ್ದರು. ಆದರೆ ಬುಧವಾರ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಮಾತನಾಡಿದ ಪಾಮ್ ಅಧಿಕಾರಿಗಳು, ಶೋನ್‌ಗೆ ಎಲ್ಲರೂ ದೂರು ನೀಡಿಲ್ಲ. ಎಲ್ಲ ಸಂತ್ರಸ್ತ ನೌಕರರು ದೂರು ನೀಡಿದ ಬಳಿಕ ಬಿಡುಗಡೆ ಬಗ್ಗೆ ಮುಂದಿನ ಪ್ರಕ್ರಿಯೆ ನಡೆಸಲು ಸುಲಭವಾಗುತ್ತದೆ ಎಂದಿದ್ದಾರೆ. ಆದರೆ ಎಲ್ಲ ಸಂತ್ರಸ್ತ ನೌಕರರು ಈ ಮೊದಲೇ ಶೋನ್‌ಗೆ ಲಿಖಿತವಾಗಿ ದೂರು ನೀಡಿದ ಬಗ್ಗೆ ತಮ್ಮ ತಮ್ಮ ಮೊಬೈಲ್‌ನಲ್ಲಿ ಹಿಂಬರಹವನ್ನು ಪಡೆದಿದ್ದರು. ಆದರೆ ಇಷ್ಟು ಮಾತ್ರ ಸಾಲದು, ಕುವೈತ್ ನಿಯಮದ ಪ್ರಕಾರ, ಶೋನ್ ವೆಬ್‌ಸೈಟ್‌ಗೆ ಹೋಗಿ, ಅಲ್ಲಿ ದೂರಿನ ಕೋಡ್ ಸಂಖ್ಯೆಯನ್ನು ನಮೂದಿಸಬೇಕು. ಈ ವಿಚಾರ ಗೊತ್ತಿಲ್ಲದ ಸಂತ್ರಸ್ತ ನೌಕರರು ತಮ್ಮ ಮೊಬೈಲ್‌ಗೆ ಬಂದ ದೂರು ಸ್ವೀಕಾರದ ಪ್ರತಿಯನ್ನು ಇಟ್ಟುಕೊಂಡು ಸುಮ್ಮನಾಗಿದ್ದರು. ಇದೀಗ ವೆಬ್‌ಸೈಟ್‌ನಲ್ಲಿ ದೂರು ಸ್ವೀಕಾರದ ಸಂಖ್ಯೆಯನ್ನು ನಮೂದಿಸುವಂತೆ ಸೂಚಿಸಿರುವುದರಿಂದ ಮತ್ತೆ ಅಧಿಕಾರಿಗಳ ಸಭೆ ಮುಂದೂಡುವ ಸ್ಥಿತಿಗೆ ತಲುಪಿದೆ. ಸಂತ್ರಸ್ತ ನೌಕರರ ನೆರವಿಗೆ ಅನಿವಾಸಿ ಭಾರತೀಯರು ಧಾವಿಸಿದ್ದಾರೆ. ಪ್ರತಿಯೊಬ್ಬ ಸಂತ್ರಸ್ತ ನೌಕರರ ದೂರಿನ ನೋಂದಣಿ ಸಂಖ್ಯೆಯನ್ನು ವೆಬ್‌ಸೈಟ್‌ಗೆ ಭರ್ತಿ ಮಾಡಲು ನೆರವಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಾರದಲ್ಲಿ ಕುವೈತ್‌ನಲ್ಲಿ ಗುರುವಾರ ಮಾತ್ರ ಬಾಕಿ ಉಳಿದಿದೆ. ಶುಕ್ರವಾರ ಮತ್ತು ಶನಿವಾರ ರಜಾ ದಿನ. ಇನ್ನು ಏನಿದ್ದರೂ ರವಿವಾರದ ಬಳಿಕ ಮುಂದಿನ ವಾರ ಸಂತ್ರಸ್ತ ನೌಕರರ ಬಿಡುಗಡೆ ಪ್ರಯತ್ನ ನಡೆಯಬೇಕಾಗಿದೆ ಎನ್ನುತ್ತವೆ ಮೂಲಗಳು.

ಕುವೈತ್‌ನಲ್ಲಿ ಮತ್ತೊಂದು ಉದ್ಯೋಗ ವಂಚನೆ ಪ್ರಕರಣ ಪತ್ತೆ

ಶೋನ್ ಹಾಗೂ ಪಾಮ್ ಅಧಿಕಾರಿಗಳು ಬುಧವಾರ ಮಾತುಕತೆ ನಡೆಸಿದ ಸಂದರ್ಭ ಇನ್ನೊಂದು ಉದ್ಯೋಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸ್ತುತ ಸಂತ್ರಸ್ತಗೊಂಡ 72 ಮಂದಿ ಭಾರತೀಯ ನೌಕರರಂತೆಯೆ ಇನ್ನೂ 53 ಮಂದಿ ಭಾರತೀಯ ನೌಕರರು ಬೇರೊಂದು ಕ್ಯಾಂಪ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿ ಇರುವುದನ್ನು ಭಾರತೀಯ ರಾಯಭಾರಿ ಕಚೇರಿಗೆ ಪಾಮ್ ತಿಳಿಸಿದೆ.

ಇದೇ ಉದ್ಯೋಗ ಕಂಪೆನಿಯು 52 ಮಂದಿಯನ್ನು ವೇತನ ನೀಡದೆ ಸತಾಯಿಸಿತ್ತು. ಕೊನೆಗೆ ವೇತನ ನೀಡುವುದಾಗಿ ಬೇರೆ ಕಡೆಗೆ ಕೆಲಸಕ್ಕೆ ಕರೆದುಕೊಂಡು ಹೋಗಿದೆ. ಅಲ್ಲಿಯೂ ವೇತನ ನೀಡದೆ ವಂಚಿಸಿದೆ. ಆ ಕ್ಯಾಂಪ್‌ನಲ್ಲಿ ಇರುವವರು ಉತ್ತರ ಹಾಗೂ ಮಧ್ಯಭಾರತದ ನೌಕರರು. ಅವರು ಕೂಡ ಇವರಂತೆಯೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ 72 ಮಂದಿಯ ಬಿಡುಗಡೆ ಬಳಿಕ ಆ 52 ಮಂದಿಯ ಬಿಡುಗಡೆಗೆ ಪ್ರಯತ್ನ ನಡೆಸುವಂತೆ ಪಾಮ್ ಅಧಿಕಾರಿಗಳು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News