ಉಳ್ಳಾಲ: ಮುಂದುವರಿದ ಕಡಲ್ಕೊರೆತದ ಆರ್ಭಟ

Update: 2019-06-12 17:41 GMT

ಉಳ್ಳಾಲ: ಕಳೆದ ಕೆಲವು ದಿನಗಳಿಂದ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಯೊಂದಿಗೆ ಕಡಲ್ಕೊರೆತದ ಆರ್ಭಟವು ವಿಪರೀತಗೊಂಡಿದ್ದು, ಸಮುದ್ರದ ಬದಿಯ ಹಲವು ಮನೆಗಳಿಗೆ ಹಾನಿಯಾಗುತ್ತಿದ್ದು ಕಡಲತಡಿಯ ಜನರು ಆತಂಕದಿಂದ ಬದುಕುವಂತಾಗಿದೆ.

ಕಡಲ್ಕೊರೆತದಿಂದಾಗಿ ಉಚ್ಚಿಲ ಕೋಟೆ ಬಳಿಯ ವಿಶ್ವನಾಥ್, ನಾಗೇಶ್ ಹಾಗೂ ಅಬ್ದುಲ್ಲ ಅವರ ಮನೆಗೆ ಬಹಳಷ್ಟು ಹಾನಿಯಾಗಿದೆ. ಸಮುದ್ರ ಕೊರೆತ ಹೀಗೆ ಮುಂದುವರಿದರೆ ಗುರುವಾರ ಭಾಗಶಃ ಈ ಮನೆಗಳು ಸಮುದ್ರಪಾಲಾಗುವ ಸಾಧ್ಯತೆ ಹೆಚ್ಚಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ರವಿಶಂಕರ್ ಅಭಿಪ್ರಾಯಪಡುತ್ತಾರೆ.

ಉಚ್ಚಿಲ ಕೋಟೆ ನಿವಾಸಿಗಳಾಗಿರುವ ಆರ್‍ಸಿಸಿ ಮನೆ ಹೊಂದಿರುವ ವಿಶ್ವನಾಥ್ ಹಾಗೂ ನಾಗೇಶ್ ಅವರ ಮನೆಯ ಶೆಡ್ ಕುಸಿದು ಬಿದ್ದಿದೆ. ಎರಡು ತೆಂಗಿನ ಮರ ಹಾಗೂ ಆರು ಮರ ಮರ ಕಡಲು ಪಾಲಾಗಿದೆ.

ಕಿಲೇರಿಯಾ ನಗರದ ಮೊದಿನ್, ಆಸಿಫ್, ಅಬ್ಬಾಸ್ ಅವರ ಮನೆ ಸಂಪೂರ್ಣ ಧರೆಗುರುಳಿದೆ. ಸುಮಾರು ಹದಿನೈದು ಮನೆಗಳಿಗೆ ಹಾನಿಯಾಗಿದೆ. ಕೈಕೋ ರಸ್ತೆಯ ಎಂಟು ಮನೆಗಳಿಗೆ ಸಮುದ್ರದ ಅಲೆಗಳ ಹೊಡೆತದಿಂದ ಭಾರೀ ಹಾನಿಯಾಗಿದೆ. ಸಮ್ಮರ್ ಸ್ಯಾಂಡ್ ರೆಸಾರ್ಟ್ ಕಟ್ಟಡದ ವೇದಿಕೆ ಧರೆಗುರುಳಿದೆ. ರಿಫಾಯಿಯ ಹಾಗೂ ಕಿಲೇರಿಯಾ ಮಸೀದಿ ಕಟ್ಟಡಗಳಿಗೆ ಸಮುದ್ರದ ಅಲೆಗಳ ಹೊಡೆತ ಇನ್ನೂ ಹೆಚ್ಚುತ್ತಿದೆ. ಬುಧವಾರದ ಮಳೆಗೆ ಸಮುದ್ರದ ಅಬ್ಬರಕ್ಕೆ ಜನರು ಆತಂಕಗೊಂಡಿದ್ದಾರೆ.

ಉಚ್ಚಿಲ ಫೆರಿಬೈಲು ಬಳಿಯ ರೋಹಿತ್ ಮಾಸ್ಟರ್ ಹಾಗೂ ಭವಾನಿ ಅವರ ಮನೆಗೂ ಹಾನಿಯಾಗಿದೆ. ಈ ಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಬಹಳಷ್ಟು ಹಾನಿಯಾದ ಕಾರಣ ಇಲ್ಲಿಗೆ ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿ ಯೋಜನೆ ಮಂಜೂರಾಗಿತ್ತು.  ಅದರಂತೆ ತಲಾ 100ಮೀ. ಗೆ ಒಂದರಂತೆ 10ಬ್ರೇಕ್ ವಾಟರ್ ನಿರ್ಮಾಣವಾಗಲಿದ್ದು ಸೋಮೇಶ್ವರ ಬಟ್ಟಂಪ್ಪಾಡಿ ಬಳಿ ಮಾತ್ರ ಬ್ರೇಕ್ ವಾಟರ್  ನಿರ್ಮಾಣಗೊಂಡಿರುವ ಕಾರಣ ಬ್ರೇಕ್ ವಾಟರ್‍ನಿಂದಾಗಿ ಮತ್ತು ಶಾಶ್ವತ ಯೋಜನೆಯಲ್ಲಿರುವಂತೆ ರೀಪು ನಿರ್ಮಾಣವಾಗದಿರುವುದು ಈ ಭಾಗದಲ್ಲಿ ಕಡಲ್ಕೊರೆತಕ್ಕೆ ಹೆಚ್ಚಿನ ಅವಕಾಶ ಕೊಟ್ಟಂತಾಗಿದೆ ಎಂಬ ಆರೋಪ ಸ್ಥಳೀಯರ ಆರೋಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News