ಭಟ್ಕಳ: ಶಾಸಕ ಸುನಿಲ್ ನಾಯ್ಕರಿಂದ ಕೆ.ಪಿ.ಎಸ್ ಶಾಲೆ ಉದ್ಘಾಟನೆ

Update: 2019-06-12 17:54 GMT

ಭಟ್ಕಳ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಭಾಷಾ ಜ್ಞಾನ ಅತ್ಯಗತ್ಯವಾಗಿದ್ದು, ಇದನ್ನು ಮನಗಂಡ ಸರಕಾರ ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯಲು ಕ್ರಮ ಕೈಗೊಂಡಿದೆ ಎಂದು ಶಾಸಕ ಸುನಿಲ್ ಬಿ. ನಾಯ್ಕ ಹೇಳಿದರು.

ಅವರು ತಾಲೂಕಿನ ಕೈಕಿಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆರ್ನಮಕ್ಕಿಯಲ್ಲಿ ಆರಂಭವಾದ ಆಂಗ್ಲ ಮಾಧ್ಯಮ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು. ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ನೈತಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿಸಬೇಕು. ಆಂಗ್ಲ ಭಾಷಾ ಕಲಿಕೆಯ ಬಗ್ಗೆ ಆಸಕ್ತಿಯನ್ನು ಹೊಂದಿದ್ದರೂ ಮಾತೃಭಾಷೆಯನ್ನು ಕಡೆಗಣಿಸಬಾರದು. ಕನ್ನಡದ ಬಗ್ಗೆ ಪ್ರೀತಿ, ಅಭಿಮಾನವನ್ನು ತೋರಬೇಕು ಎಂದರು. ಒಂದು ಶಾಲೆಯಲ್ಲಿ ಕೇವಲ 30 ಮಕ್ಕಳಿಗೆ ಮಾತ್ರ ಅವಕಾಶ ಇದ್ದು, ಚೀಟಿ ಎತ್ತುವುದರ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಇಲ್ಲಿನ ಬೇಡಿಕೆಯನ್ನು ಪರಿಗಣಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ ಅಧ್ಯಕ್ಷತೆಯನ್ನು ವಹಿಸಿದ್ದರು. ಕೈಕಿಣಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಸುಬ್ರಾಯ ನಾಯ್ಕ, ಸದಸ್ಯ ಉದಯ ಕೋಟದಮಕ್ಕಿ ಮಾತನಾಡಿದರು. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಯಲ್ಲಮ್ಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತೆರ್ನಮಕ್ಕಿ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪ್ರಶಾಂತ ಪಟಗಾರ ವಂದಿಸಿದರು. ಸಿಆರ್‍ಪಿ ಸೀಮಾ ಜೋಶಿ, ತೆರ್ನಮಕ್ಕಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ತ್ರಿವೇಣಿ ನಾಯಕ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News