ಮುಲಕ್ಕಲ್ ವ್ಯಂಗ್ಯಚಿತ್ರಕ್ಕೆ ಪ್ರಶಸ್ತಿ: ಕೆಥೊಲಿಕ್ ಬಿಷಪ್ ಮಂಡಳಿ ಪ್ರತಿಭಟನೆ

Update: 2019-06-12 17:58 GMT

ಕೊಚ್ಚಿ,ಜೂ.9: ಅತ್ಯಾಚಾರ ಪ್ರಕರಣದ ಆರೋಪಿ ಕೇರಳದ ಬಿಷಪ್ ಫ್ರಾಂಕೊ ಮುಲ್ಲಕ್ಕಲ್‌ರನ್ನು ಹುಂಜವಾಗಿ ಚಿತ್ರಿಸಿ, ಅವರ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿರುವುದನ್ನು ಶ್ಲಾಘಿಸುವ ವ್ಯಂಗ್ಯಚಿತ್ರಕ್ಕೆ ಕೇರಳ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ ನೀಡಿರುವುದನ್ನು ಕೇರಳ ಕೆಥೊಲಿಕ್ ಬಿಷಪ್ ಮಂಡಳಿ (ಕೆಸಿಬಿಸಿ) ತೀವ್ರವಾಗಿ ಖಂಡಿಸಿದೆ.

ವಿವಾದಾತ್ಮಕ ವ್ಯಂಗ್ಯಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ ನೀಡಿರುವ ಕೇರಳ ಲಲಿತಾ ಕಲಾ ಅಕಾಡಮಿಯ ನಿರ್ಧಾರವನ್ನು ಹಿಂಪಡೆಯಬೇಕೆಂದು ಕೆಸಿಬಿಸಿ ಆಗ್ರಹಿಸಿದೆ. ಈ ಮಧ್ಯೆ ಕೇರಳ ರಾಜ್ಯ ಸರಕಾರವು, ಈ ವಿಷಯದ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಲಲಿತಾ ಕಲಾ ಅಕಾಡೆಮಿಗೆ ಸೂಚನೆ ನೀಡಿದೆ.

ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಕ್ರೈಸ್ತ ಸಮುದಾಯವು ಎಲ್‌ಡಿಎಫ್‌ನ್ನು ಬೆಂಬಲಿಸದೆ ಇದ್ದುದಕ್ಕಾಗಿ ಎಲ್‌ಡಿಎಫ್ ಸರಕಾರವು ಕ್ರೈಸ್ತರ ವಿರುದ್ಧ ಗುರಿಯಿಡುತ್ತಿದೆಯೇ ಎಂದು ಕೆಸಿಬಿಸಿ ಪ್ರಶ್ನಿಸಿದೆ.ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಎಲ್‌ಡಿಎಫ್ 20 ಸ್ಥಾನಗಳ ಪೈಕಿ ಕೇವಲ ಒಂದರಲ್ಲಿ ಜಯ ಗಳಿಸಿತ್ತು.

ಈ ಅಶ್ಲೀಲ ವ್ಯಂಗ್ಯಚಿತ್ರಕ್ಕೆ ನೀಡಲಾದ ಪ್ರಶ್ನಿಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಅಕಾಡಮಿ ಅಧಿಕಾರಿಗಳು ಕ್ಷಮೆಯಾಚಿಸಬೇಎಂದು ಕೆಸಿಬಿಸಿ ಆಗ್ರಹಿಸಿತ್ತು.

‘ವಿಶ್ವಾಸಂ ರಕ್ಷತಿ’ (ನಂಬಿಕೆ ರಕ್ಷಿಸಲ್ಪಟ್ಟಿತು) ಎಂಬ ಶೀರ್ಷಿಕೆಯ ಈ ವ್ಯಂಗ್ಯಚಿತ್ರವನ್ನು ಚೆಂಗಳಂನ ಕೆ.ಕೆ. ಸುಭಾಷ್ ರಚಿಸಿದ್ದು, ಅದನ್ನು ಕೇರಳ ಲಲಿತಾ ಕಲಾ ಅಕಾಡೆಮಿ ವರ್ಷದ ಶ್ರೇಷ್ಠ ವ್ಯಂಗ್ಯಚಿತ್ರವೆಂದು ಆಯ್ಕೆ ಮಾಡಿತ್ತು.

ಕ್ರೈಸ್ತ ಸನ್ಯಾಸಿನಿಯೊಬ್ಬರನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಮುಲಕ್ಕಲ್ ಆರೋಪಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News