ಐಎಎಸ್‌ ಅಧಿಕಾರಿಗಳಿಗೆ ಸಿಗುತ್ತಿದ್ದ ಹುದ್ದೆಗಳಿನ್ನು ಖಾಸಗಿ ಪಾಲು !

Update: 2019-06-12 18:05 GMT

ಹೊಸದಿಲ್ಲಿ, ಜೂ. 12: ಉನ್ನತ ಅಧಿಕಾರ ವ್ಯವಸ್ಥೆಯಲ್ಲಿ ನಿರ್ಣಾಯಕ ತೀರ್ಮಾನ ತೆಗೆದುಕೊಳ್ಳುವ ಹೊಣೆಗಾರಿಕೆಯಿರುವ ಉಪ ಕಾರ್ಯದರ್ಶಿ ಹಾಗೂ ನಿರ್ದೇಶಕನ ಹುದ್ದೆಗಳಿಗೆ ಖಾಸಗಿ ವಲಯದ ತಜ್ಞರನ್ನು ನಿಯೋಜಿಸುವ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ.

ಸಾಮಾನ್ಯವಾಗಿ ಈ ಹುದ್ದೆಯನ್ನು ಸರಕಾರಿ ಉದ್ಯೋಗಿಗಳು ನಿರ್ವಹಿಸುತ್ತಿದ್ದರು. ಐಎಎಸ್‌ನಂತಹ ವಿವಿಧ ಎ ಗುಂಪಿನ ಸೇವೆಯಿಂದ ಹಾಗೂ ಕೇಂದ್ರ ಕಾರ್ಯಾಲಯ ಸೇವೆಯ ಭಡ್ತಿಯಿಂದ ಈ ಸೇವೆಗೆ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು.

ಉಪ ಕಾರ್ಯದರ್ಶಿ ಹಾಗೂ ನಿರ್ದೇಶಕ ಮಟ್ಟದ ಹುದ್ದೆಗಳಿಗೆ ಖಾಸಗಿ ವಲಯದ ತಜ್ಞರನ್ನು ನಿಯೋಜಿಸುವ ಕುರಿತಂತೆ ಔಪಚಾರಿಕ ಪ್ರಸ್ತಾವವನ್ನು ಸಿದ್ಧಪಡಿಸುವಂತೆ ತರಬೇತಿ ಇಲಾಖೆಯ ಕಾರ್ಯದರ್ಶಿ ಸಿ. ಚಂದ್ರಮೌಳಿ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ ಒಟ್ಟು 40 ಅಧಿಕಾರಿಗಳು ನಿಯೋಜನೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ನೇರ ನೇಮಕಾತಿಯ ಮೂಲಕ ವಿಶೇಷ ತಜ್ಞರನ್ನು ನಿಗದಿತ ಅವಧಿಯ ಗುತ್ತಿಗೆಯ ಆಧಾರದಲ್ಲಿ ಉನ್ನತ ಅಧಿಕಾರ ವ್ಯವಸ್ಥೆಯಲ್ಲಿ ಸೇರ್ಪಡೆಗೊಳಿಸುವುದು ಅಗತ್ಯವೆಂದು ನೀತಿ ಆಯೋಗ ಇತ್ತೀಚೆಗೆ ವರದಿಯೊಂದರಲ್ಲಿ ಶಿಫಾರಸು ಮಾಡಿತ್ತು.

 ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿ ಹುದ್ದೆಗಳಿಗೆ ಖಾಸಗಿ ವಲಯದ ವಿಶೇಷ ತಜ್ಞರಿಂದ ಅರ್ಜಿ ಆಹ್ವಾನಿಸಿ ಶೀಘ್ರದಲ್ಲೇ ಜಾಹೀರಾತುಗಳನ್ನು ಪ್ರಕಟಿಸಲಾಗುವುದೆಂದು ಮೂಲಗಳು ತಿಳಿಸಿವೆ.

ಕಳೆದ ವರ್ಷದ ಜೂನ್‌ನಲ್ಲಿ ಕೇಂದ್ರ ಸಿಬ್ಬಂದಿ ಸಚಿವಾಲಯವು ಜಂಟಿ ಕಾರ್ಯದರ್ಶಿಗಳ ಹುದ್ದೆಗಳಿಗೆ ನೇರನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು. ಖಾಸಗಿ ವಲಯದಿಂದ ಸರಕಾರಿ ಸಂಸ್ಥೆಗಳಿಗೆ ವಿಶೇಷ ತಜ್ಞರ ನೇಮಕಾತಿಯು, ಅಧಿಕಾರಶಾಹಿ ವ್ಯವಸ್ಥೆಯೊಳಗೆ ಹೊಸ ಪ್ರತಿಭೆಗಳನ್ನು ತರುವ ನಿಟ್ಟಿನಲ್ಲಿ ಮೋದಿ ಸರಕಾರ ಇಟ್ಟ ಪ್ರಥಮ ಹೆಜ್ಜೆ ಎಂದು ಬಣ್ಣಿಸಲಾಗಿತ್ತು.

ಸರಕಾರದ ಈ ಜಾಹೀರಾತಿಗೆ ಪ್ರತಿಕ್ರಿಯೆಯಾಗಿ ಒಟ್ಟು 6077 ಅರ್ಜಿಗಳು ಆಗಮಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News