ಬೋಳಂತೂರು ಶಾಲಾ ಶಿಕ್ಷಕಿಯಿಂದ ಜಾತಿ ನಿಂದನೆ: ಆರೋಪ

Update: 2019-06-12 18:11 GMT

ಬಂಟ್ವಾಳ, ಜೂ. 12: ಬೋಳಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಅವರು ಜಾತಿ ನಿಂದನೆ ಮಾಡಿ, ತಮಗೆ ಯಾವುದೇ ಮಾಹಿತಿ ನೀಡದೇ ಶಾಲೆಯ ಅಕ್ಷರ ದಾಸೋಹ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಈ ಶಾಲೆಯ ಅಕ್ಷರ ದಾಸೋಹದಲ್ಲಿ ಕೆಲಸ ಮಾಡುತ್ತಿದ್ದ ಜಯಂತಿ ಅವರು ಆರೋಪಿಸಿದ್ದಾರೆ.

ಶಾಲೆಯ ಅಕ್ಷರ ದಾಸೋಹ ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ಬಂಟ್ವಾಳ ಕಾರ್ಯ ನಿರ್ವಹಣಾಧಿಕಾರಿ, ತಹಶೀಲ್ದಾರ್ ಹಾಗೂ 
ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ತಾಲೂಕು ಸಮಿತಿಯ ಕಾರ್ಯದರ್ಶಿ ಅವರಿಗೆ ಮನವಿ ಮೂಲಕ ದೂರು ನೀಡಲಾಗಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬೋಳಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಲ್ಲಿನ ಉತ್ತಮ ನಗರಮನೆಯ ನಿವಾಸಿಗಳಾದ ಲೀಲಾ, ಜಯಂತಿ ಅವರು ಕಳೆದ 17 ವರ್ಷಗಳಿಂದ ಬಿಸಿಯೂಟ ಕೆಲಸ ಮಾಡುತ್ತಾ ಬಂದಿರುತ್ತೇವೆ. ಆದರೆ, ಪ್ರತಿ ದಿನದಂತೆ ನಾವು ಜೂ. 10ರಂದು ಬೆಳಿಗ್ಗೆ ಬಿಸಿಯೂಟ ತಯಾರು ಮಾಡುತ್ತಿರುವ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅವರು ಜಾತಿ ನಿಂದನೆ ಮಾಡಿದರಲ್ಲದೆ, ಸ್ವಚ್ಛತೆ ಇಲ್ಲದಿರುವುದರಿಂದ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಅಕ್ಷರ ದಾಸೋಹದ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದರೂ, ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಜಯಂತಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದರಿಂದ ನಮಗೆ ಅನ್ಯಾಯವಾಗಿದ್ದು, ಈ ಬಗ್ಗೆ ಸಂಬಂಧ ಅಧಿಕಾರಿಗಳು, ಜನಪ್ರತಿನಿಧಿಗಳು ನಮಗಿಬ್ಬರಿಗೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News