×
Ad

ಕಚೇರಿ ಶಿಸ್ತು ಇನ್ನು ಸಚಿವರಿಗೂ ಅನ್ವಯ: ಪ್ರಧಾನಿ ಸೂಚನೆ

Update: 2019-06-13 10:01 IST

ಹೊಸದಿಲ್ಲಿ, ಜೂ.13: ಕೇಂದ್ರ ಸಚಿವರು ಇನ್ನು ಪ್ರತಿದಿನ ಮುಂಜಾನೆ 9:30ರೊಳಗೆ ಕಚೇರಿಗೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. ಜತೆಗೆ ಮನೆಯಿಂದಲೇ ಕಾರ್ಯನಿರ್ವಹಿಸುವುದನ್ನು ಕೈಬಿಟ್ಟು ಇತರರಿಗೆ ಮಾದರಿಯಾಗುವಂತೆಯೂ ಸಲಹೆ ಮಾಡಿದ್ದಾರೆ. ಅಂತೆಯೇ ಸಂಸತ್ ಅಧಿವೇಶನ ಇರುವ 40 ದಿನಗಳ ಅವಧಿಯಲ್ಲಿ ಸಚಿವರು ಎಲ್ಲಿಗೂ ಪ್ರವಾಸ ಕೈಗೊಳ್ಳದಂತೆಯೂ ಸೂಚನೆ ನೀಡಿದ್ದಾರೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯ ತಮ್ಮದೇ ನಿದರ್ಶನವನ್ನು ಮೋದಿ ಮುಂದಿಟ್ಟಿದ್ದಾರೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸಿ, ಆ ದಿನದ ಕಾರ್ಯಸೂಚಿಯನ್ನು ಅವರು ಸಿದ್ಧಪಡಿಸುತ್ತಿದ್ದರು ಎಂದು ಸಚಿವರೊಬ್ಬರು ಹೇಳಿದ್ದಾರೆ. ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ ಮೋದಿ ಸಭೆಯಲ್ಲಿ ಈ ಸಲಹೆಗಳನ್ನು ನೀಡಿದರು.

ಹಿರಿಯ ಸಚಿವರು ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ನೀಡುವಂತೆ ಹಾಗೂ ಸಂಸದರ ಭೇಟಿಗೆ ಸಮಯಾವಕಾಶ ನೀಡುವಂತೆಯೂ ಸೂಚಿಸಿದ್ದಾರೆ. ತಮ್ಮ ಖಾತೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಪ್ರತಿದಿನ ಕೆಲ ಸಮಯವಾದರೂ ಚರ್ಚೆ ನಡೆಸುವುದು ಸೂಕ್ತ ಎಂದು ಸಹೋದ್ಯೋಗಿಗಳಿಗೆ ಸಲಹೆ ಮಾಡಿದ್ದಾರೆ.

ಐದು ವರ್ಷಗಳ ಕಾರ್ಯಸೂಚಿಯನ್ನು ಸಿದ್ಧಪಡಿಸುವ ಜತೆ ಜತೆಗೆ 100 ದಿನಗಳಲ್ಲಿ ಪರಿಣಾಮ ನೀಡುವ ನಿರ್ಧಾರಗಳನ್ನು ಅನುಷ್ಠಾನಗೊಳಿಸಲು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News