×
Ad

ಮಾಹಿತಿ ಇಲ್ಲದೆ ಮಾತನಾಡದೆ ಚರ್ಚೆಗೆ ಬನ್ನಿ: ಬಿಜೆಪಿ ನಾಯಕರಿಗೆ ಐವನ್ ಡಿಸೋಜಾ ಸವಾಲು

Update: 2019-06-13 18:37 IST

ಮಂಗಳೂರು, ಜೂ.13: ರಾಜ್ಯ ಸರಕಾರದ ವಿರುದ್ಧ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಮಾಹಿತಿ ಇಲ್ಲದೆ ಆರೋಪಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಬದಲು ಅಭಿವೃದ್ದಿ ಬಗ್ಗೆ ನನ್ನ ಜತೆ ಚರ್ಚೆಗೆ ಬರಲಿ. ರಾಜ್ಯ ಸರಕಾರದ ಸಾಧನೆಗಳನ್ನು ನಾನು ದಾಖಲೆ ಸಹಿತ ಅವರಿಗೆ ತಿಳಿಸುವೆ ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯಾವುದೇ ರೀತಿಯ ಮಾಹಿತಿ ಇಲ್ಲದೆ ಸರಕಾರದ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲು ವಿಫಲವಾಗಿದೆ ಎಂದರು.

ರೈತರಿಗೆ ಸಾಲ ದೊರಕಿಲ್ಲ. ಬಿಪಿಎಲ್ ಪಡಿತರ ಚೀಟಿ ದೊರಕಿಲ್ಲ ಎಂಬುದಾಗಿ ರಾಜ್ಯ ಸರಕಾರದ ವಿರುದ್ಧ ಶೋಭಾ ಕರಂದ್ಲಾಜೆ ವ್ಯಕ್ತಪಡಿಸುತ್ತಿ ರುವ ಆಕ್ರೋಶ ವಾಸ್ತವದಲ್ಲಿ ಕೇಂದ್ರ ಸರಕಾರದ ವಿರುದ್ಧವಾಗಿದೆ. ಕೇಂದ್ರದಲ್ಲಿ ಮಂತ್ರಿ ಸ್ಥಾನ ದೊರೆಯದೆ ಹತಾಶರಾಗಿರುವ ಅವರು ಈ ರೀತಿ ರಾಜ್ಯ ಸರಕಾರದ ವಿರುದ್ಧ ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

ರೈತರ ಸಾಲ ಮನ್ನಾ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕ್‌ಗಳ ಬೆಳೆ ಸಾಲಕ್ಕೆ ಸಂಬಂಧಿಸಿ 16.73 ಕೋಟಿ ರೂ. ಬಿಡುಗಡೆಯಾಗಬೇಕಾಗಿದೆ. ಇದರಲ್ಲಿ 3710 ಫಲಾನುಭವಿಗಳಿಗೆ ಈಗಾಗಲೇ 10.73 ಕೋಟಿ ರೂ. ಬಿಡುಗಡೆಯಾಗಿದೆ. ಸಹಕಾರ ವಲಯಕ್ಕೆ ಸಂಬಂಧಿಸಿ 526.45 ಕೋಟಿ ರೂ.ಗಳಲ್ಲಿ 32, 960 ಫಲಾನುಭವಿಗಳಿಗೆ 197.47 ಕೋಟಿ ರೂ. ಬಿಡುಗಡೆಯಾಗಿದೆ. ಪೋಡಿ ಮುಕ್ತ ಗ್ರಾಮ ಅಭಿಯಾನದಡಿ ಸುಳ್ಯವು ಸಂಪೂರ್ಣ ಪೋಡಿ ಮುಕ್ತ ತಾಲೂಕು ಆಗಿದೆ. ಕೃಷಿ ಭೂಮಿ ಸಕ್ರಮೀಕರಣದಡಿ ಪುತ್ತೂರಿನಲ್ಲಿಯೇ 10,847 ಅರ್ಜಿಗಳು ಸ್ವೀಕರಿಸಲಾಗಿದೆ. ಸರಕಾರದಿಂದ ಅಕ್ರಮ ಸಕ್ರಮ ಸಮಿತಿ ರಚನೆಯಾಗಿ ಈ ಅರ್ಜಿಗಳು ಇತ್ಯರ್ಥವಾಗಲಿದೆ ಎಂದು ಅವರು ಹೇಳಿದರು.

ಹಿಂದಿನ ಬಿಜೆಪಿ ಸರಕಾರದ ಆಡಳಿತದಲ್ಲಿ ಐದು ವರ್ಷದಲ್ಲಿ 38000 ಬಿಪಿಎಲ್ ಕಾರ್ಡ್ ನೀಡಲಾಗಿದ್ದರೆ, ಕಾಂಗ್ರೆಸ್ ಆಡಳಿತದ ಸರಕಾರದಲ್ಲಿ 1.21 ಕೋಟಿ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಸುಳ್ಯ ತಾಲೂಕೊಂದರಲ್ಲೇ 19270 ಬಿಪಿಎಲ್ ಕಾರ್ಡ್ ನೀಡಲಾಗಿದೆ ಎಂದು ಅವರು ಹೇಳಿದರು.

ಪುತ್ತೂರಿನಲ್ಲಿ 94 ಬಿ ಫಾರ್ಮ್‌ನಡಿ 67000 ಎಕರೆ ಭೂಮಿಯನ್ನು ರೈತರಿಗೆ ಹಂಚಲಾಗಿದೆ. ಇವೆಲ್ಲವೂ ಸರಕಾರದಿಂದ ಆಗಿರುವ ಅಭಿವೃದ್ಧಿ ಕಾರ್ಯಗಳು. ಇವುಗಳ ಬಗ್ಗೆ ಯಾವತ್ತೂ ಚರ್ಚೆಗೆ ನಾು ಸಿದ್ಧ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ನಾಗೇಂದ್ರ ಕುಮಾರ್, ಅಶೋಕ್ ಕುಮಾರ್ ಡಿ.ಕೆ. ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ

ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಇಂದು 12 ಮಂದಿ ಅರ್ಜಿದಾರರಿಗೆ ವಿವಿಧ ರೀತಿಯ ಚಿಕಿತ್ಸೆಗಾಗಿ ಒಟ್ಟು 4,36,128 ರೂ. ಮೊತ್ತದ ಚೆಕ್‌ಗಳನ್ನು ಐವನ್ ಡಿಸೋಜಾ ವಿತರಿಸಿದರು. ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಮ್ಮ ಶಿಫಾರಸಿನ ಮೇರೆಗೆ 6 ಕೋಟಿ ರೂ. ಪರಿಹಾರವನ್ನು ವಿತರಿಸಿರುವುದಾಗಿ ಅವರು ಈ ಸಂದರ್ಭ ತಿಳಿಸಿದರು.

ಆಂಗ್ಲ ಮಾಧ್ಯಮ ದಾಖಲಾತಿ ಮಿತಿ ಸಡಿಲಿಕೆಗೆ ಮನವಿ

ದ.ಕ. ಜಿಲ್ಲೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ಆರಂಭಿಸಲು ಅನುಮತಿ ನೀಡಿರುವಂತೆ, ಪ್ರಸ್ತುತ 30 ವಿದ್ಯಾರ್ಥಿ1ಗಳಿಗೆ ದಾಖಲಾತಿಗೆ ಅವಕಾಶವಿದೆ. ಈ ಮತಿಇಯನ್ನು ಸಡಿಲಿಕೆ ಮಾಡಿ ಯಾವುದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯವರು ತಿಳಿಸಿದ್ದಾರೆ ಎಂದು ಐವನ್ ಡಿಸೋಜಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News