ಬಂಟಕಲ್ಲು: ಸಿಡಿಲು ಬಡಿದು ಮನೆಗಳಿಗೆ ಲಕ್ಷಾಂತರ ರೂ. ಹಾನಿ

Update: 2019-06-13 13:26 GMT

ಶಿರ್ವ, ಜೂ.13: ಬಂಟಕಲ್ಲು ಸಮೀಪದ ಪಲ್ಕೆ ಗಿಲ್ಬರ್ಟ್ ಕಂಪೌಂಡ್‌ನ ಗಿಲ್ಬರ್ಟ್ ಡಿಸೋಜ ಎಂಬವರ ಮನೆಗೆ ಬುಧವಾರ ರಾತ್ರಿ ಗಂಟೆ 11:15ರ ಸುಮಾರಿಗೆ ಸಿಡಿಲು ಬಡಿದ ಪರಿಣಾಮ ಲಕ್ಷಾಂತರ ರೂ. ಹಾನಿ ಸಂಭವಿ ಸಿದ್ದು, ಮನೆಯಲ್ಲಿದ್ದ ದಂಪತಿ ಸಹಿತ ಮಗು ಅಪಾಯದಿಂದ ಪಾರಾಗಿದ್ದಾರೆ.

ಮನೆಯ ಮಾಳಿಗೆಯ ಕೋಣೆಯ ಗೋಡೆಗೆ ಸಿಡಿಲು ಬಡಿದಿದ್ದು, ಇದರಿಂದ ಗೋಡೆ ಬಿರುಕು ಬಿಟ್ಟಿದೆ. ಮನೆಯ ಫ್ಯಾನ್, ವಯರಿಂಗ್ ಕಳಚಿ ಬಿದ್ದಿದೆ. ಅದೇ ಕೋಣೆಯಲ್ಲಿ ಮಲಗಿದ್ದ ಗಿಲ್ಬರ್ಟ್ ಡಿಸೋಜರ ಮಗ ಗ್ಲ್ಯಾನ್ ಡಿಸೋಜ ಹಾಗೂ ಸೊಸೆ ಪ್ರಮೀಳಾ ಮತ್ತು ಅವರ ಎರಡು ವರ್ಷದ ಮಗು ಎಡನ್ ಯಾವುದೇ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯ ಕೆಳಭಾಗದ ಮೈನ್ ಸ್ವಿಚ್ ಸುಟ್ಟು ಹೋಗಿದ್ದು, ವಯರಿಂಗ್, ಸ್ವಿಚ್ ಬೋರ್ಡ್, ಫ್ರಿಜ್ ಸಹಿತ ಎಲ್ಲ ಫ್ಯಾನ್‌ಗಳಿಗೆ ಹಾನಿಯಾಗಿವೆ. 3ಎಚ್‌ಪಿಯ ಪಂಪ್, ಸಹಿತ ಪೈಬರ್ ಮೀಟರ್ ಬೋರ್ಡ್‌ನ ಹಲಗೆ ಹಾರಿ, ಬಿರುಕು ಬಿಟ್ಟಿದೆ. ಇದರಿಂದ ಸುಮಾರು ಮೂರು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಅದೇ ರೀತಿ ಬಂಟಕಲ್ಲು ಪಲ್ಕೆ ಅಂಜಲಿನ್ ಕ್ಯಾಸ್ತಲಿನೊ ಎಂಬವರ ಮನೆಗೆ ಬುಧವಾರ ರಾತ್ರಿ ಸಿಡಿಲು ಬಡಿದು ಮನೆಯ ವಯರಿಂಗ್ ಕಳಚಿದ್ದು, ಮೂರು ಫ್ಯಾನ್, ಎರಡು ಮೈನ್‌ಸ್ವಿಚ್, ಪಂಪಿನ ಸ್ಟಾರ್ಟರ್ ಸಹಿತ 1 ಎಚ್‌ಪಿ ಪಂಪು, ಇನ್ವರ್ಟರ್ ಸುಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ. ಇದರಿಂದ ಒಟ್ಟು 70ಸಾವಿರ ರೂ. ನಷ್ಟ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News