×
Ad

ಬಂಟ್ವಾಳ-ಮೂಡುಬಿದಿರೆ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ: ಆರೋಪ

Update: 2019-06-13 19:02 IST

ಬಂಟ್ವಾಳ, ಜೂ. 13: ಮಳೆಗಾಲ ಆರಂಭಗೊಡಿದ್ದು, ಸಂಬಂಧ ಪಟ್ಟ ಇಲಾಖೆಗಳು ಇನ್ನೂ ಸಿದ್ಧತೆಗಳನ್ನು ನಡೆಸದ ಪರಿಣಾಮ ಬಂಟ್ವಾಳ-ಮೂಡುಬಿದಿರೆ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಸಮಸ್ಯೆಗಳ ತಾಣವಾಗಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

ಈ ರಸ್ತೆಯ ಬಂಟ್ವಾಳದಿಂದ ಪುಚ್ಚೆಮೊಗರುವರೆಗೆ ಬಂಟ್ವಾಳ ತಾಲೂಕಿಗೆ ಸಂಬಂಧಿಸಿ ಚರಂಡಿಗಳ ನಿರ್ವಹಣೆಯಾಗಿಲ್ಲ. ಕಳೆದ ವರ್ಷ ಈ ಹೊತ್ತಿಗೆ ಮಳೆಗಾಲದಲ್ಲಿ ರಸ್ತೆಯ ಸ್ಥಿತಿ ಶೋಚನೀಯವಾಗಿ ಪ್ರಯಾಣಿಕರು, ವಾಹನಗಳು ಪರದಾಡುವ ಸ್ಥಿತಿ ಎದುರಾಗಿತ್ತು. ಈ ಬಾರಿ ಮತ್ತೆ ಮಳೆಗಾಲ ಆರಂಭವಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಈ ರಸ್ತೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು ಕಾರ್ಕಳ-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಲಿದೆ ಎಂದು ಘೋಷಣೆಯಾಗಿದೆ. ಪ್ರಸ್ತುತ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದೆ. ಕಳೆದ ಬಾರಿಯೂ ರಸ್ತೆ ಚರಂಡಿ ದುರಸ್ಥಿಯಾಗದ ಕಾರಣ ರಸ್ತೆಯಲ್ಲಿ ನೀರು ಹರಿದು ಹೋಗಿ ರಸ್ತೆ ಬದಿ ಹೊಂಡಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇತ್ತೀಚೆಗೆ ಸುರಿದ ಮಳೆಗೆ ಕೆಲವೆಡೆ ಕಚ್ಛಾ ಒಳ ರಸ್ತೆಯ ಮಣ್ಣು ಕೊಚ್ಚಿ ಹೋಗಿ ಮುಖ್ಯ ರಸ್ತೆಗೆ ಸೇರಿ ಕೆಸರುಮಯವಾಗಿದೆ. ಇಳಿಜಾರು ತಿರುವು ರಸ್ತೆಯಲ್ಲಿ ಇದು ದ್ವಿಚಕ್ರ ವಾಹನಸವಾರರಿಗೆ ಅಪಾಯಕಾರಿಯಾಗಿದೆ. ಬೇಸಿಗೆಯಲ್ಲಿ ವಿವಿಧ ಕಾರಣಗಳಿಗೆ ರಸ್ತೆ ಬದಿ ಮಣ್ಣು ತೆಗೆದು ಹಾಗೇ ಬಿಟ್ಟಿದ್ದರಿಂದ ಮಳೆ ಬರುತ್ತಿದ್ದಂತೆ ರಸ್ತೆಗೆ ಬಂದು ಸೇರಿದೆ. ಪೈಪ್‍ಲೈನ್‍ಗಾಗಿ ತೆಗೆದ ಗುಂಡಿಗಳು ಬಾಯ್ದೆರೆಯತೊಡಗಿದೆ ಎಂದು ಆರೋಪಿಸಿದ್ದಾರೆ.

ಎಲ್ಲೆಲ್ಲಿ ಅಪಾಯಕಾರಿ ?:

ಬಂಟ್ವಾಳ ಪುರಸಭೆ ವ್ಯಾಪ್ತಿ ಸಹಿತ ಅಮ್ಟಾಡಿ, ಪಂಜಿಕಲ್ಲು, ರಾಯಿ, ಸಂಗಬೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿ ಈ ರಸ್ತೆ ಹಾದು ಹೋಗುತ್ತಿದ್ದು, ನಿರ್ವಹಣೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ. ಕಳೆದ ಬಾರಿ ಹದಗೆಟ್ಟಿದ್ದ ರಸ್ತೆಗೆ ಮರು ಡಾಮರೀಕರಣ ನಡೆದಿದೆ. ಆದರೆ, ಕೆಲವೆಡೆ ಗುಂಡಿ ಬೀಳಲಾರಂಭವಾಗಿದ್ದು, ಮಳೆಗಾಲದಲ್ಲಿ ರಸ್ತೆಯಲ್ಲಿ ಹೊಂಡಗಳಾಗುವ ಆತಂಕವಿದೆ. ಕೆಲವೆಡೆ ರಸ್ತೆಯ ಎಚ್ಚರಿಕೆ ಸೂಚನಾ ಫಲಕಗಳಿಗೆ ಬಳ್ಳಿ ಸುತ್ತಿ ಕಾಣದಂತಾಗಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

ಜನಪ್ರತಿನಿಧಿಗಳು ಈ ಬಗ್ಗೆ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖಾಧಿಕಾರಿಗಳಿಗೆ ಸೂಚಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News