ಮನೆ ಮನೆಯಲ್ಲಿ ತ್ಯಾಜ್ಯ ವಿಂಗಡನೆಗೆ ಸ್ವ ಸಹಾಯ ಸಂಘಗಳ ಸಂಕಲ್ಪ

Update: 2019-06-13 13:38 GMT

ಮುಡಿಪು, ಜೂ.13: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಕೈರಂಗಳ ‘ಎ’ ಮತ್ತು ಕೈರಂಗಳ ‘ಬಿ’ ಒಕ್ಕೂಟಗಳ 200ಕ್ಕೂ ಹೆಚ್ಚು ಸದಸ್ಯರು ಪ್ಲಾಸ್ಟಿಕ್ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಸುಡದೆ ಮನೆಯಲ್ಲಿಯೇ ವಿಂಗಡಿಸಿ ಸಂಗ್ರಹಿಸಿಟ್ಟು ಗ್ರಾಪಂನ ಘನ ಸಂಪನ್ಮೂಲ ನಿರ್ವಹಣಾ ಘಟಕದ ಮೂಲಕ ವಿಲೇವಾರಿ ಮಾಡುವುದಾಗಿ ಸಾಮೂಹಿಕ ಸಂಕಲ್ಪ ಮಾಡಿದ್ದಾರೆ.

ಹೂ ಹಾಕುವಕಲ್ಲು ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸ್ವಸಹಾಯ ಸಂಘಗಳ 2 ಒಕ್ಕೂಟಗಳ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್. ಶೀನ ಶೆಟ್ಟಿ ಭಾಗವಹಿಸಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಮೂಲದಲ್ಲೇ ವಿಂಗಡಿಸಿ ಸಮರ್ಪಕವಾಗಿ ನಿರ್ವಹಿಸುವುದರಿಂದ ಪರಿಸರ ಹಾಗೂ ಜೀವ ಸಂಕುಲಕ್ಕೆ ಆಗುವ ಅನೂಕೂಲಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಪ್ಲಾಸ್ಟಿಕ್ ಕಸ ಸುಡುವ ಮತ್ತು ಬಿಸಾಡುವ ಅಭ್ಯಾಸವನ್ನು ಸಂಪೂರ್ಣವಾಗಿ ನಿಲ್ಲಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಕರೆ ನೀಡಿದರು.

ಒಕ್ಕೂಟಗಳ ಅಧ್ಯಕ್ಷ ಗಣೇಶ್ ಗಟ್ಟಿ, ಪುಷ್ಪರಾಜ್, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಒಕ್ಕೂಟದ ಮೇಲ್ವಿಚಾರಕಿ ಮೋನಿ, ಸೇವಾ ಪ್ರತಿನಿಧಿ ನಳಿನಾಕ್ಷಿ, ಗ್ರಾಮ ವಿಕಾಸ ಪೇರಕಿ ಜಯಾ, ಬೆಳ್ಳಾರೆ ಸಮಾಜ ಕಾರ್ಯ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ, ಗ್ರಾಪಂ ಸದಸ್ಯೆ ಉಷಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News