ರೈಲಿನಲ್ಲಿ ಮಸಾಜ್ ಭಾರತೀಯ ಸಂಸ್ಕೃತಿಯ ವಿರೋಧಿ ಎಂದ ಬಿಜೆಪಿ ಸಂಸದ

Update: 2019-06-13 14:03 GMT

ಹೊಸದಿಲ್ಲಿ, ಜೂ.13: ಪ್ರಯಾಣಿಕರಿಗೆ ಮಸಾಜ್ ಸೇವೆಯನ್ನು ಒದಗಿಸುವ ರೈಲ್ವೇ ಇಲಾಕಖೆಯ ಪ್ರಸ್ತಾವವನ್ನು ಟೀಕಿಸಿರುವ ಇಂದೋರ್ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ ಈ ಬಗ್ಗೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರಿಗೆ ಪತ್ರ ಬರೆದಿದ್ದು, ಮಹಿಳೆಯರ ಉಪಸ್ಥಿತಿಯಲ್ಲಿ ನೀಡಲಾಗುವ ಈ ಸೇವೆ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಇಂದೋರ್‌ನಿಂದ ಚಲಿಸುವ 39 ರೈಲುಗಳಲ್ಲಿ ಮುಂದಿನ ಒಂದೆರಡು ವಾರಗಳಲ್ಲಿ ಪ್ರಯಾಣಿಕರಿಗೆ ಮಸಾಜ್ ಸೇವೆ ಒದಗಿಸಲು ರೈಲ್ವೇ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಜೂನ್ 8ರಂದು ಅಧಿಕಾರಿಗಳು ತಿಳಿಸಿದ್ದರು. ಈ ಸೇವೆಯ ಮೂಲಕ ರೈಲ್ವೇ ಇಲಾಖೆ ವಾರ್ಷಿಕ ಹೆಚ್ಚುವರಿ 20 ಲಕ್ಷ ರೂ. ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ ಮತ್ತು ಈ ಸೇವೆಯನ್ನು ಒದಗಿಸಲು ರೈಲಿನಲ್ಲಿ ಪ್ರಯಾಣಿಸುವ 20,000 ಸೇವಾ ಪೂರೈಕೆದಾರರು ಖರೀದಿಸುವ ಟಿಕೆಟ್‌ಗಳಿಂದ ವಾರ್ಷಿಕ ಹೆಚ್ಚುವರಿ 90 ಲಕ್ಷ ರೂ. ಆದಾಯ ಗಳಿಸುವ ಅಂದಾಜು ಹಾಕಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯರ ಮುಂದೆ ಇಂತಹ ಸೇವೆಯನ್ನು ಪ್ರಯಾಣಿಕರಿಗೆ ನೀಡುವುದು ಭಾರತೀಯ ಸಂಸ್ಕೃತಿಯ ತತ್ವಗಳಿಗೆ ಸರಿಯಾಗಿದೆಯೇ? ಇಂತಹ ಕೆಟ್ಟ ಸೇವೆಗಳ ಬದಲಿಗೆ ನನ್ನ ಪ್ರಕಾರ, ರೈಲುಗಳಲ್ಲಿ ವೈದ್ಯಕೀಯ ಸೇವೆ, ವೈದ್ಯರನ್ನು ಒದಗಿಸುವುದು ಅತ್ಯವಶ್ಯಕ ಎಂದು ಲಾಲ್ವಾನಿ ತನ್ನ ಪತ್ರದಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News