ಮಂಗಳೂರು: ಹಿರಿಯ ನ್ಯಾಯವಾದಿ ಸೀತಾರಾಮ್ ಶೆಟ್ಟಿ ನಿಧನ
ಮಂಗಳೂರು, ಜೂ.13: ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನ ಉಪಾಧ್ಯಕ್ಷ, ಮಂಗಳೂರಿನ ಹಿರಿಯ ನ್ಯಾಯವಾದಿ ಎಂ.ಸೀತಾರಾಮ್ ಶೆಟ್ಟಿ (82) ಉಸಿರಾಟದ ತೊಂದರೆಯಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನರಾದರು.
ಮಂಜಲ್ ತೋಡಿ ಸೀತಾರಾಮ್ ಶೆಟ್ಟಿ ಅವರು ಎಂ. ಸೀತಾರಾಮ್ ಶೆಟ್ಟಿ ಎಂದೇ ಹೆಸರುವಾಸಿ. ಮೃತರು ಮೊದಲು ಕಾಸರಗೋಡಿನಲ್ಲಿ ಕಳ್ಳಿಗೆ ಮಹಾಬಲ ಭಂಡಾರಿ ಅವರಲ್ಲಿ ಜೂನಿಯರ್ ಆಗಿ ವಕೀಲಿ ವೃತ್ತಿ ಆರಂಭಿಸಿದರು. ಬಳಿಕ ಮಂಗಳೂರಿಗೆ ಮರಳಿದ ಸೀತಾರಾಮ್ ಶೆಟ್ಟಿ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡರು.
ಸೀತಾರಾಮ್ ಶೆಟ್ಟಿ ಅವರು ಕರ್ನಾಟಕ ಸರಕಾರದ ಹಲವು ಆಯೋಗಗಳ ವಿಶೇಷ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿದರು. ಜಾಗತಿಕ ಬಂಟರ ಯಾನೆ ನಾಡವರ ಪ್ರತಿಷ್ಠಾನದ ಹಿರಿಯ ಪದಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಉಳ್ಳಾಲದ ಮಾಜಿ ಶಾಸಕ ದಿ. ಯು.ಟಿ.ಫರೀದ್ ಅವರ ಕಾನೂನು ಸಲಹೆಗಾರರಾಗಿದ್ದರು. ಅಲ್ಲದೆ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಗೂ ಹಲವು ವರ್ಷಗಳ ಕಾಲ ಕಾನೂನು ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಕೂಡ ಸೀತಾರಾಮ್ ಶೆಟ್ಟಿ ಅವರಲ್ಲಿ ಜೂನಿಯರ್ ವಕೀಲರಾಗಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.
ಮೃತ ಸೀತಾರಾಮ್ ಶೆಟ್ಟಿ ಮಂಗಳೂರಿನ ವಾಸ್‌ಲೇನ್‌ನಲ್ಲಿ ವಾಸವಿದ್ದರು. ಮೃತರು ಹಲವು ವರ್ಷಗಳಿಂದ ರಕ್ತದೊತ್ತಡ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಜೂ.7ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ಮಧ್ಯಾಹ್ನ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಜೂ.14ರಂದು ಮಧ್ಯಾಹ್ನ 1ರಿಂದ 3 ಗಂಟೆವರಗೆ ಮೃತರಿಗೆ ಸಂತ ಅಲೋಶಿಯಸ್ ಲಯೊಲಾ ಗ್ರೌಂಡ್‌ನಲ್ಲಿ ಅಂತಿಮ ಗೌರವ ಸಲ್ಲಿಸಲಾಗುವುದು. ಬಳಿಕ ನಗರದ ನಂದಿಗುಡ್ಡದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಸಚಿವ ಯು.ಟಿ. ಖಾದರ್ ಸಹಿತ ಗಣ್ಯರು ಅಂತಿಮ ದರ್ಶನ ಪಡೆಯಲಿದ್ದಾರೆ.
ಸಂತಾಪ: ಹಿರಿಯ ನ್ಯಾಯವಾದಿ ಸೀತಾರಾಮ್ ಶೆಟ್ಟಿ ಅವರ ಅಗಲುವಿಕೆ ನಾಡಿಗೆ ದೊಡ್ಡ ನಷ್ಟ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸಂತಾಪ ಸೂಚಿಸಿದ್ದಾರೆ.
ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಹಿರಿಯ ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.