ಸಾಮಾಜಿಕ ಮಾಧ್ಯಮಗಳ ನಿಯಂತ್ರಣ ಸಂವಿಧಾನದ ಆಶಯಗಳಿಗೆ ಅನುಗುಣವಾಗಿರಲಿ: ಡಾ.ಈಶ್ವರ ಭಟ್

Update: 2019-06-13 14:47 GMT

ಉಡುಪಿ, ಜೂ.13:ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬರುವ ಸಂವಹನ ಸಮಾಜದೊಡನೆ ವ್ಯಕ್ತಿಗಳು ಸಂಪರ್ಕ ಹೊಂದಲು ಇರುವ ನೈಸರ್ಗಿಕ ತಹತಹಿಕೆಯಾಗಿದ್ದು, ಕೈಗಾರಿಕಾ ಕ್ರಾಂತಿಯ ನಂತರ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಾದ ಪ್ರಗತಿಯಿಂದಾಗಿ ಈ ಸಂವಹನ ವಿಭಿನ್ನ ಮಾಧ್ಯಮಗಳ ಮೂಲಕ ವ್ಯಕ್ತವಾಗುತ್ತಿದೆ. ಇದು ವ್ಯಕ್ತಿಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಭಾಗವಾಗಿದ್ದು, ಇದು ದುರುಪಯೋಗವಾಗದಂತೆ ತಡೆಯುವ ಜವಾಬ್ದಾರಿ ಶಾಸಕಾಂಗದ ಮೇಲಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ದ ಉಪಕುಲಪತಿ ಪ್ರೊ.(ಡಾ.) ಈಶ್ವರ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಕುಂಜಿಬೆಟ್ಟಿನಲ್ಲಿರುವ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ‘ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಹಿನ್ನೆಲೆಯಲ್ಲಿ ಮುಕ್ತ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಪ್ರತಿಬಿಂಬಗಳು’ ಎಂಬ ವಿಷಯದ ಮೇಲೆ ನಡೆದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಂದು ಮಾಹಿತಿತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಅಭಿಪ್ರಾಯಗಳು ಅನೂಹ್ಯ ವೇಗದಿಂದ ಲಕ್ಷಾಂತರ ಜನರನ್ನು ತಲುಪಿ ಅತ್ಯಂತ ಕ್ಶಿಪ್ರವಾಗಿ ಜನ ಅದಕ್ಕೆ ಪ್ರತಿಕ್ರಿಯಿಸಿ ಅದರಿಂದ ಅನಾಹುತಗಳುಂಟಾಗುತ್ತಿವೆ. ಹಾಗೆಯೇ ಎಷ್ಟೋ ಮುಗ್ದರ ಬಾಳು ಸಹ ಇದರಿಂದ ಹಾಳಾಗುತ್ತಿರುತ್ತದೆ ಎಂದವರು ಹೇಳಿದರು.

ಸಾಮಾಜಿಕ ಮಾದ್ಯಮದಿಂದ ಎಷ್ಟು ಅನುಕೂಲತೆಗಳಾಗಿವೆಯೋ ಅಷ್ಟೇ ಅನಾಹುತಗಳೂ ಆಗಿವೆ. ಸಾಮಾಜಿಕ ಕ್ರಾಂತಿಯ ಹರಿಕಾರನಾಗಿ ಸಾಮಾಜಿಕ ಮಾಧ್ಯಮಗಳು ಕೆಲಸ ಮಾಡುತ್ತಿವೆ. ಇದೇ ಸಂದರ್ದಲ್ಲಿ ಇದರಲ್ಲಿ ಹರಿಯಬಿಟ್ಟಿರುವ ಸುಳ್ಳು ವದಂತಿಗಳಿಂದ ಸತ್ಯಕ್ಕೆ ಅಪಚಾರವಾಗಿ ಆಗಬಾರದ ಅನಾಹುತಗಳು ನಡೆದಿದೆ ಎಂದವರು ವಿವರಿಸಿದರು.

ಹೀಗಾಗಿ ಸಾಮಾಜಿಕ ಮಾಧ್ಯಮಗಳ ಸದ್ಬಳಕೆಯಾಗಬೇಕು. ದುರ್ಬಳಕೆ ಸಲ್ಲದು. ಈ ಬಗ್ಗೆ ಸೂಕ್ತ ಕಾಯಿದೆಯನ್ನು ತಂದು ಆ ಮೂಲಕ ಸಂವಿಧಾನದಲ್ಲಿ ಖಾತ್ರಿಗೊಳಿಸಲ್ಪಟ್ಟ ವಾಕ್ ಮತ್ತು ಅಭಿವ್ಯಕ್ತ ಸ್ವಾತಂತ್ರಕ್ಕೆ ಅಪಚಾರವಾಗದಂತೆ ಸಾಮಾಜಿಕ ಮಾಧ್ಯಮಗಳ ಮೇಲೆ ಕಟ್ಟುಪಾಡುಗಳನ್ನು ಹೇರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂದು ಆಯೋಜಿಸಿರುವ ವಿಚಾರ ಸಂಕಿರಣ ಅತ್ಯಂತ ಪ್ರಸ್ತುತವಾಗಿದ್ದು, ಈ ಸಮಸ್ಯೆಯ ಮೇಲೆ ಬೆಳಕು ಚೆಲ್ಲಲಿ ಎಂದು ಡಾ.ಈಶ್ವರ ಭಟ್ ಆಶಿಸಿದರು.

ಪಶ್ಚಿಮ ಬಂಗಾಳದ ಎನ್.ಯು.ಜೆ.ಎಸ್.ನಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ.(ಡಾ.)ಸಂದೀಪ್ ಭಟ್ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವ ಜಿ.ಬಿ.ಪಾಟೀಲ್ ಸಾಂದರ್ಭಿಕವಾಗಿ ಮಾತನಾಡಿದರು.

ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.(ಡಾ.) ಪ್ರಕಾಶ್ ಕಣಿವೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪನ್ಯಾಸಕಿ ಡಾ. ನಿರ್ಮಲ ಕುಮಾರಿ ಸ್ವಾಗತಿಸಿದರು. ಉಪನ್ಯಾಸಕಿ ಸುರೇಖ ವಂದಿಸಿ, ವಿದ್ಯಾರ್ಥಿನಿ ಜೋಆನ್ ವೆನಿಸಾ ಡಿಸಿಲ್ವಾ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ಪ್ರೊ.ಸಂದೀಪ್ ಭಟ್, ಬೆಂಗಳೂರಿನ ಕೆಎಲ್‌ಇ ಸೊಸೈಟಿ ಕಾನೂನು ಕಾಲೇಜಿನ ಡಾ.ಗೌಡಪ್ಪನವರ್‌ಹಾಗೂ ಬೆಳಗಾವಿ ಕಾನೂನು ಕಾಲೇಜಿನ ಪ್ರೊ. ಜಿ.ಎಂ.ವಾಘ್ ಅವರು ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News