ಉತ್ತರಪ್ರದೇಶ: ಪತ್ರಕರ್ತನಿಗೆ ಥಳಿತ ನಾಲ್ವರು ರೈಲ್ವೆ ಪೊಲೀಸರ ವಿರುದ್ಧ ಪ್ರಕರಣ ದಾಖಲು

Update: 2019-06-13 14:53 GMT

ಮುಝಫರ್‌ನಗರ (ಉತ್ತರಪ್ರದೇಶ), ಜೂ. 13: ಉತ್ತರಪ್ರದೇಶದ ಶ್ಯಾಮ್ಲಿ ಜಿಲ್ಲೆಯಲ್ಲಿ ಪತ್ರಕರ್ತರೋರ್ವರಿಗೆ ಥಳಿಸಿರುವುದಕ್ಕೆ ಸಂಬಂಧಿಸಿ ಠಾಣಾಧಿಕಾರಿ ಸಹಿತ ನಾಲ್ವರು ರೈಲ್ವೆ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪತ್ರಕರ್ತರಿಗೆ ಥಳಿಸಿರುವುದು ದಾಖಲಾಗಿರುವ ವೀಡಿಯೊ ಮಂಗಳವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು.

ಈ ವೀಡಿಯೊದಲ್ಲಿ ಟಿ.ವಿ. ಪತ್ರಕರ್ತ ಅಮಿತ್ ಶಾ ಅವರಿಗೆ ಸಾದಾ ಉಡುಪು ಧರಿಸಿದ್ದ ರೈಲ್ವೆ ಪೊಲೀಸ್‌ನ ಸಿಬ್ಬಂದಿ ಥಳಿಸುತ್ತಿರುವುದು ಕಂಡು ಬಂದಿತ್ತು. ಥಳಿಸಿದ ನಂತರ ಪತ್ರಕರ್ತನನ್ನು ರೈಲ್ವೆ ಪೊಲೀಸರು ಬಂಧಿಸಿದ್ದರು. ಹಾನಿ ಎಸಗಿರುವ, ಅವಮಾನ ಮಾಡಿರುವ, ದರೋಡೆ ಹಾಗೂ ತಪ್ಪಾಗಿ ಬಂಧಿಸಿರುವ ಕುರಿತಂತೆ ಪೊಲೀಸರು ಠಾಣಾಧಿಕಾರಿ ರಾಕೇಶ್ ಕುಮಾರ್ ಸಹಿತ ನಾಲ್ವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಜಿಆರ್‌ಪಿ ಪೊಲೀಸ್ ಅಧೀಕ್ಷಕ ಸುಭಾಷ್ ಚಂದ್ ದುಬೆ ಹೇಳಿದ್ದಾರೆ.

ಶಾಮ್ಲಿಯಲ್ಲಿ ಸರಕು ಸಾಗಿಸುವ ರೈಲು ಹಳಿ ತಪ್ಪಿರುವುದನ್ನು ವರದಿ ಮಾಡುವ ಸಂದರ್ಭ ಶರ್ಮಾ ಅವರೊಂದಿಗೆ ಪೊಲೀಸರು ವಾಗ್ವಾದ ನಡೆಸಿದ ಬಳಿಕ ಈ ಘಟನೆ ನಡೆದಿದೆ. ''ಜಿಆರ್‌ಪಿ ಸಿಬ್ಬಂದಿ ನನಗೆ ಥಳಿಸಿದರು ಹಾಗೂ ಲಾಕ್‌ಅಪ್‌ನಲ್ಲಿ ಇರಿಸಿದರು'' ಎಂದು ಶರ್ಮಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News