ಉಡುಪಿಯಲ್ಲಿ ಭಾರೀ ಮಳೆ; ಅಲ್ಲಲ್ಲಿ ಮನೆಗಳಿಗೆ ಹಾನಿ,ಕೃತಕ ನೆರೆ

Update: 2019-06-13 16:07 GMT

ಉಡುಪಿ, ಜೂ.13: ಜಿಲ್ಲೆಗೆ ಕಾಲಿಟ್ಟು ಎರಡು ದಿನಗಳ ಬಳಿಕ ಬಿರುಸು ಪಡೆದ ಮುಂಗಾರು, ಬುಧವಾರ ಸಂಜೆಯಿಂದ ಜಿಲ್ಲೆಯಾದ್ಯಂತ ಧಾರಾಕಾರ ವಾಗಿ ಸುರಿಯುತಿದ್ದು, ಉಡುಪಿ ತಾಲೂಕಿನಲ್ಲಿ 24 ಗಂಟೆಗಳ ಅಂತರದಲ್ಲಿ 12.8 ಸೆ.ಮೀ. ಮಳೆ ಬಿದ್ದಿದೆ. ಇದರಿಂದ ಕಳೆದೆರಡು ತಿಂಗಳಿನಿಂದ ಕುಡಿಯುವ ನೀರಿಗಾಗಿ ಪರಿತಪಿಸುತಿದ್ದ ಜನತೆ ತೃಪ್ತಿಯ ನಿಟ್ಟುಸಿರುವ ಬಿಡುವಂತಾಗಿದೆ.

ಬುಧವಾರ ಬೆಳಗ್ಗೆ 8 ಗಂಟೆಯಿಂದ ಗುರುವಾರ ಬೆಳಗ್ಗೆ 8ಯ ನಡುವೆ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 89.8ಮಿ.ಮೀ. ಮಳೆ ಸುರಿದಿದೆ. ಉಡುಪಿಯಲ್ಲಿ ಅತ್ಯಧಿಕ ಅಂದರೆ 128 ಮಿ.ಮೀ. ಮಳೆಯಾದರೆ ಕುಂದಾಪುರದಲ್ಲಿ 67.8ಮಿ.ಮೀ. ಹಾಗೂ ಕಾರ್ಕಳದಲ್ಲಿ 88.5ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ. ಮಳೆಯೊಂದಿಗೆ ಜೋರಾದ ಗಾಳಿಯೂ ಬೀಸುತಿದ್ದು, ಆಗಾಗ ಸಿಡಿಲು ಹಾಗೂ ಗುಡುಗು ಇದ್ದು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯೂ ಸಂಭವಿಸಿದ ಬಗ್ಗೆ ವರದಿಗಳು ಬಂದಿವೆ.

ಭಾರಿ ಮಳೆಯಿಂದ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೇ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲೆಯ ನಾನಾ ಕಡೆಗಳಲ್ಲಿ ನೀರು ಮನೆಗಳಿಗೆ ನುಗ್ಗಿದ ವರದಿಗಳೂ ಬಂದಿವೆ.

ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ಸರಸ ನಾಯ್ಕ ಕೊಡ್ಗಿ ಎಂಬವರ ವಾಸ್ತವ್ಯದ ಮನೆಗೆ ರಾತ್ರಿ ಎರಡು ಗಂಟೆ ಸುಮಾರಿಗೆ ಸಿಡಿಲು ಬಡಿದು ಮನೆಯ ಎರಡು ಸಿಮೆಂಟ್ ಶೀಟ್, 30ಕ್ಕೂ ಅಧಿಕ ಹೆಂಚು ಹಾಗೂ ವಿದ್ಯುತ್ ವಯರಿಂಗ್ ಹಾನಿಗೊಂಡಿದ್ದು, 14,000ರೂ. ನಷ್ಟದ ಅಂದಾಜು ಮಾಡಲಾಗಿದೆ.

ಇಂದು ಅಪರಾಹ್ನ 1:30 ಸುಮಾರಿಗೆ ಚಿತ್ತೂರು ಗ್ರಾಮದ ಗೋವಿಂದ ಶೆಟ್ಟಿ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದೆ. ಇದರಿಂದ 20,000ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಬಸ್ರೂರು ಗ್ರಾಮದ ಶಾಂತೇರಿ ಕಾಮಾಕ್ಷಿ ದೇವಸ್ಥಾನ ಹಾಗೂ ಪಕ್ಕದ ನಿತೀನ್ ಭಟ್ ಎಂಬವರ ಮನೆಯ ಮೇಲೆ ಮರ ಬಿದ್ದು 20,000ರೂ.ಗೂ ಅಧಿಕ ಹಾನಿ ಸಂಭವಿಸಿದೆ.

ಇನ್ನು ತ್ರಾಸಿ ಗ್ರಾಮದ ಮೊವಾಡಿ ಕಮಲ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು, 15,000ರೂ. ನಷ್ಟವಾಗಿದೆ. ಗಂಗೊಳ್ಳಿಯ ನರಸಿಂಹ ಎಂಬವರ ವಾಸದ ಕಚ್ಛಾ ಮನೆಯ ಮೇಲೆ ಮರಬಿದ್ದು 30,000ರೂ.ಗಳ ನಷ್ಟದ ವರದಿ ಬಂದಿದೆ. ಹಳ್ಳಾಡಿ ಹರ್ಕಾಡಿ ಗ್ರಾಮದ ಕೃಷ್ಣ ನಾಯ್ಕ ಎಂಬವರ ಬಚ್ಚಲುಮನೆ ಮೇಲೆ ಅಡಿಕೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು 15,000ರೂ.ನಷ್ಟವಾಗಿದೆ.
ಕುಳಂಜೆ ಗ್ರಾಮದ ಕುಂಬಾರಮಕ್ಕಿಯಲ್ಲಿ ಸುಗುಣ ಎಂಬವರ ಮನೆ ಮೇಲೆ ಮಾವಿನಮರ ಬಿದ್ದು ಭಾಗಶ: ಹಾನಿಯಾಗಿದ್ದು 15,000ರೂ.ನಷ್ಟ ಸಂಭವಿಸಿದೆ. ಹಲ್ನಾಡು ಗ್ರಾಮದ ಕಲ್ಪನ ಎಂಬವರ ವಾಸದ ಮನೆ ಮಳೆಯಿಂದ ಭಾಗಶ: ಹಾನಿಗೊಳಗಾಗಿ 18,000ರೂ.ನಷ್ಟದ ವರದಿ ಬಂದಿದೆ.

ಕಾರ್ಕಳ ತಾಲೂಕಿನ ಸೂಡಾ ಗ್ರಾಮದ ಗ್ಲೇಟಿಸ್ ಅಲ್ಮೇಡಾ ಇವರ ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ತಗಲಿ ಹಾನಿಗೊಂಡಿದ್ದು 10,000ರೂ. ಹಾಗೂ ಮುಂಡ್ಕೂರು ಗ್ರಾಮದ ಕಳ್ಳಿಮಾರ್ ಎಂಬಲ್ಲಿರುವ ರಾಬರ್ಟ್ ಫೆರ್ನಾಂಡಿಸ್ ಎಂಬವರ ಮನೆಗೆ ಸಿಡಿಲಿನಿಂದ ವ್ಯಾಪಕ ಹಾನಿಯಾಗಿದ್ದು 80,000ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ವನಿತಾ ಅವರ ಮನೆ ಮೇಲೆ ಕಳೆದ ರಾತ್ರಿ ಮರ ಬಿದ್ದು, ಸುಮಾರು 25,000ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿಯಿಂದ ಮಾಹಿತಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News