ಜಾಗತಿಕ ಶಾಂತಿ ಸೂಚ್ಯಂಕ ಪಟ್ಟಿಯಲ್ಲಿ 141ನೇ ಸ್ಥಾನಕ್ಕೆ ಕುಸಿದ ಭಾರತ

Update: 2019-06-13 16:27 GMT

ಹೊಸದಿಲ್ಲಿ, ಜೂ.13: 2019ರ ಜಾಗತಿಕ ಶಾಂತಿ ಸೂಚ್ಯಂಕ ಪಟ್ಟಿಯಲ್ಲಿ 163 ದೇಶಗಳಲ್ಲಿ ಭಾರತ 141ನೇ ಸ್ಥಾನ ಗಳಿಸಿದ್ದರೆ ಐಸ್‌ಲ್ಯಾಂಡ್ ಅಗ್ರಸ್ಥಾನ ಕಾಯ್ದುಕೊಂಡಿದೆ ಎಂದು ವರದಿ ತಿಳಿಸಿದೆ. ಆಸ್ಟ್ರೇಲಿಯಾದ ‘ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ಸ್ ಆ್ಯಂಡ್ ಪೀಸ್’ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಅಪಘಾನಿಸ್ತಾನ ಅಂತಿಮ ಸ್ಥಾನ ಗಳಿಸಿದೆ.

ಇದುವರೆಗೆ ಈ ಸ್ಥಾನದಲ್ಲಿದ್ದ ಸಿರಿಯಾ ಒಂದು ಸ್ಥಾನ ಮೇಲೇರಿದೆ. ದಕ್ಷಿಣ ಸುಡಾನ್, ಯೆಮನ್ ಮತ್ತು ಇರಾಕ್ ಕ್ರಮವಾಗಿ 161, 160 ಮತ್ತು 159ನೇ ಸ್ಥಾನದಲ್ಲಿದೆ. ಸಾಮಾಜಿಕ ಸುರಕ್ಷೆ ಮತ್ತು ಭದ್ರತೆ, ಮಿಲಿಟರೀಕರಣದ ಮಟ್ಟ ಹಾಗೂ ದೇಶೀಯ ಮತ್ತು ಅಂತರಾಷ್ಟ್ರೀಯ ಸಂಘರ್ಷದ ಸ್ಥಿತಿ- ಈ ಮೂರನ್ನು ಮಾನದಂಡವಾಗಿರಿಸಿಕೊಂಡು ಸಮೀಕ್ಷೆ ನಡೆಸಲಾಗಿದೆ. 2008ರಿಂದಲೂ ಐಸ್‌ಲ್ಯಾಂಡ್ ಅಗ್ರಸ್ಥಾನದಲ್ಲೇ ಸ್ಥಿರವಾಗಿದೆ.

ನ್ಯೂಝಿಲ್ಯಾಂಡ್, ಆಸ್ಟ್ರಿಯಾ, ಪೋರ್ಚುಗಲ್, ಡೆನ್ಮಾರ್ಕ್ ಬಳಿಕದ ಸ್ಥಾನದಲ್ಲಿದೆ. ದಕ್ಷಿಣ ಏಶ್ಯಾ ರಾಷ್ಟ್ರಗಳಲ್ಲಿ ಭೂತಾನ್ 15ನೇ ಸ್ಥಾನ, ಶ್ರೀಲಂಕಾ 72, ನೇಪಾಳ 76 ಮತ್ತು ಬಾಂಗ್ಲಾದೇಶ 101ನೇ ಸ್ಥಾನದಲ್ಲಿದೆ. ಪಾಕಿಸ್ತಾನ 153ನೇ ಸ್ಥಾನದಲ್ಲಿದೆ. ಬಹು ವಿಧದ ತೀವ್ರ ಹವಾಮಾನ ಅಪಾಯ ಎದುರಿಸುತ್ತಿರುವ 9 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಫಿಲಿಪೀನ್ಸ್, ಜಪಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ, ಇಂಡೋನೇಶಿಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನ ಸ್ಥಾನ ಪಡೆದಿವೆ.

ಭಾರತ, ಚೀನಾ ಮತ್ತು ಬಾಂಗ್ಲಾದೇಶಗಳು ಹವಾಮಾನ ವಿಪತ್ತಿಗೆ ತುತ್ತಾಗುವ ಅಪಾಯ ಹೆಚ್ಚಿದ್ದು, ಈ ಮೂರು ದೇಶಗಳಲ್ಲಿ ಸುಮಾರು 393 ಮಿಲಿಯನ್ ಜನರು ಅಧಿಕ ಹವಾಮಾನ ಅಪಾಯದ ವ್ಯಾಪ್ತಿಯ ಪ್ರದೇಶದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News