×
Ad

ಉಡುಪಿ: ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಉದ್ಘಾಟನೆ

Update: 2019-06-13 21:58 IST

ಉಡುಪಿ, ಜೂ.13:ಕರ್ನಾಟಕ ಜಾಪದ ಕಲೆಗಳ ಪುನರುಜ್ಜೀವನ, ಸಂಶೋಧನೆ ಹಾಗೂ ಸಂರಕ್ಷಣೆಯ ಉದ್ದೇಶದಿಂದ ಖ್ಯಾತ ಜಾನಪದ ಸಂಗ್ರಾಹಕ ಹಾಗೂ ಸಂಶೋಧಕ ಎಚ್.ಎಲ್.ನಾಗೇಗೌಡರಿಂದ ಸ್ಥಾಪಿಸಲ್ಪಟ್ಟ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆ ಜೂ.16ರ ರವಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತಲ್ಲೂರು ಶಿವರಾಮ ಶೆಟ್ಟಿ ಅವರು ಗುರುವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 1979ರಲ್ಲಿ ನಾಡೋಜ ನಾಗೇಗೌಡರಿಂದ ಸ್ಥಾಪನೆಗೊಂಡ ಪರಿಷತ್ತು ಇಂದು ನಾಡಿನ ಜಾನಪದ ಸಂಪತ್ತಿನ ಸಂಶೋಧನೆ, ದಾಖಲೀಕರಣ, ಪ್ರದರ್ಶನ, ತರಬೇತಿ ಹಾಗೂ ಪ್ರಸಾರಗಳಲ್ಲಿ ನಿರತವಾಗಿದೆ ಎಂದರು.

ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆಯೊಂದಿಗೆ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಅಲ್ಲದೇ ತಾಲೂಕು ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣವೂ ಅಂದು ನಡೆಯಲಿದೆ ಎಂದು ಶಿವರಾಮ ಶೆಟ್ಟಿ ತಿಳಿಸಿದರು.

ಇದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಯ ಜಾನಪದ ವೈಭವದ ಅನಾವರಣವೂ ಅಂದು ನಡೆಯಲಿದೆ. ಅಪರಾಹ್ನ 3 ರಿಂದ 5 ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಡೋಲು ವಾದನ, ಕಂಗೀಲು ಕುಣಿತ, ಧಪ್, ಆಟಿಕಳೆಂಜ, ಕರಗ ಕೋಲಾಟ, ಪೂಜಾ ಕುಣಿತ, ಕಂಸಾಳೆ ಕುಣಿತ, ವೀರಗಾಸೆ, ಹುಲಿವೇಷ, ಗುಮಟೆ ಕುಣಿತ, ಹೂವಿನಕೋಲು, ಹಾಲಕ್ಕಿ ಸುಗ್ಗಿ ಕುಣಿತ, ಮಾದರ ಮತ್ತು ಮಾಂಕಾಳಿ ಕುಣಿತಗಳ ಕಲಾ ಪ್ರದರ್ಶನವೂ ನಡೆಯಲಿದೆ ಎಂದು ಅವರು ನುಡಿದರು.

ಸಂಜೆ 5:15ಕ್ಕೆ ಸಭಾ ಕಾರ್ಯಕ್ರಮ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪರಿಷತ್‌ನ ಸದಸ್ಯ ಏರ್ಯ ಲಕ್ಷ್ಮೀನಾರಾಯಣ ಆಳ್ವ ಆಶಯ ಭಾಷಣ ಮಾಡಿದರೆ, ಜಾನಪದ ಸಂಶೋಧಕ ಡಾ.ಗಣನಾಥ ಎಕ್ಕಾರು ಪ್ರಧಾನ ಭಾಷಣ ಮಾಡುವರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಎಸ್.ಎ.ಕೃಷ್ಣಯ್ಯ, ಬನ್ನಂಜೆ ಬಾಬು ಅಮೀನ್ ಹಾಗೂ ಜಾನಪದ ಸಂಘಟಕ ರಮೇಶ್ ಕಲ್ಮಾಡಿ ಅವರನ್ನು ಸನ್ಮಾನಿಸಲಾಗುವುದು. ಕೊನೆಯಲ್ಲಿ ಪ್ರಮುಖ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನವೂ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಘಟಕದ ನಿಯೋಜಿತ ಕಾರ್ಯದರ್ಶಿ ರವಿರಾಜ್ ನಾಯಕ್, ಸಂಘಟನಾ ಕಾರ್ಯದರ್ಶಿ ಗೋಪಾಲ ಸಿ.ಬಂಗೇರ, ಸದಸ್ಯರಾದ ಸುನಿಲ್‌ಕುಮಾರ್ ಶೆಟ್ಟಿ, ರಮೇಶ್ ಕಲ್ಮಾಡಿ ಹಾಗೂ ಬ್ರಹ್ಮಾವರ ಘಟಕದ ಅಧ್ಯಕ್ಷ ನೇರಿ ಕರ್ನೇಲಿಯೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News