ಕಳಪೆ ಗುಣಮಟ್ಟದ ಅಡಕೆ ಮಿಶ್ರಣ: ಸೂಕ್ತ ಕ್ರಮಕ್ಕೆ ಮನವಿ

Update: 2019-06-13 16:57 GMT

ಪುತ್ತೂರು: ವಿದೇಶಗಳಿಂದ ಆಮದಾಗುವ ಕಳಪೆ ಗುಣಮಟ್ಟದ ಅಡಕೆಯನ್ನು ಸ್ಥಳೀಯ ಅಡಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ನಡೆಸುತ್ತಿ ರುವುದರಿಂದ ಅಡಕೆ ಧಾರಣೆಗೆ ಹೊಡೆತ ಬಿದ್ದಿದ್ದು, ಇದನ್ನು ಖಂಡಿಸಿ ಹಾಗೂ ತಕ್ಷಣವೇ ಇಂತಹಾ ಅಡಕೆ ಗಾರ್ಬಲ್‍ಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪುತ್ತೂರು ಅಡಕೆ ಬೆಳೆಗಾರರ ಹಿತರಕ್ಷಣಾ ವೇದಿಕೆ ವತಿಯಿಂದ ಗುರುವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು. 

ದ.ಕ ಜಿಲ್ಲೆಯ ರೈತರಿಗೆ ಅಡಕೆ ಪ್ರಧಾನ ಕೃಷಿಬೆಳೆಯಾಗಿದ್ದು, ಇದನ್ನೇ ನಂಬಿಕೊಂಡು ರೈತರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ ಕಳೆದ ಎರಡು-ಮೂರು ವರ್ಷಗಳಿಂದ ಅಡಕೆ ಧಾರಣೆಯಲ್ಲಿ 340 ಇದ್ದದ್ದು ಇದೀಗ ಕಲಬೆರಕೆ ಅಡಕೆಯಿಂದಾಗಿ 220 ಕ್ಕೆ ಇಳಿದಿದೆ. ಈ ಮೂಲಕ ಸ್ಥಿರ ಧಾರಣೆ ಇಲ್ಲದಂತಾಗಿದೆ. ಬರ್ಮಾ, ಮಲೇಷಿಯಾ, ಇಂಡೋನೇಷಿಯಾ ಮುಂತಾದ ಕಡೆಗಳಲ್ಲಿ ಕಾಡುಗಳಲ್ಲಿ ಬೆಳೆಯುವ ಕಳಪೆ ಗುಣಮಟ್ಟದ ಅಡಕೆ ಭಾರತಕ್ಕೆ ಆಮದಾಗುತ್ತಿದ್ದು, ದ.ಕ. ಜಿಲ್ಲೆಯ ಕೆಲವೆಡೆ ಗಾರ್ಬಲ್‍ಗಳಲ್ಲಿ ಸ್ಥಳೀಯ ಅಡಕೆಯೊಂದಿಗೆ 140 ರೂ.ಗೆ ಸಿಗುವ ಈ ಅಡಕೆ ಕಲಬೆರಕೆಯಾಗುತ್ತಿದೆ. ಪರಿಣಾಮ ನೇರ ದ.ಕ.ಜಿಲ್ಲೆಗೆ ಹೊಡೆತ ಬಿದ್ದಿದೆ. ಪುತ್ತೂರಿನ ಕೋಡಿಂಬಾಡಿಯಂತಹ ಗ್ರಾಮೀಣ ಪ್ರದೇಶ ಅಡಕೆ ಗಾರ್ಬಲ್ ಒಂದಕ್ಕೆ 100 ಟನ್ ಕಳಪೆ ಗುಣಮಟ್ಟದ ಅಡಕೆ ಬರುತ್ತಿದೆ. ಈ ಕಳಪೆ ಗುಣಮಟ್ಟದ ಅಡಕೆ ದ.ಕ. ಜಿಲ್ಲೆಯನ್ನು ಪ್ರವೇಶಿಸದಂತೆ ಮಾಡಬೇಕು ಎಂದು ಆಗ್ರಹಿಸಲಾಯಿತು.

ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತ ಹೆಚ್.ಕೆ. ಕೃಷ್ಣಮೂರ್ತಿ ಅವರು ಈ ಕುರಿತು ಅಸಿಸ್ಟೆಂಟ್ ಕಮಿಷನರ್ ಕಮರ್ಷಿಯಲ್ ಟ್ಯಾಕ್ಸ್‍ಗೆ ಪತ್ರ ಬರೆದು ತನಿಖೆ ನಡೆಸುವಂತೆ ತಿಳಿಸುತ್ತೇನೆ. ಈ ಭಾಗದಲ್ಲಿ ಎಲ್ಲೆಲ್ಲಿ, ಯಾರು ಇಂತಹಾ ಕಲಬೆರಕೆ ಅಡಕೆ ಮಾರಾಟ ಮಾಡುತ್ತಾರೆ ಎಂಬುದನ್ನು ಬರೆದುಕೊಡಿ ಎಂದು ತಿಳಿಸಿದ ಸಹಾಯಕ ಆಯುಕ್ತರು, ಪೊಲೀಸ್ ತನಿಖೆ ಮೂಲಕ ಸರ್ಚ್ ವಾರಂಟ್ ಮಾಡುವ ಅಧಿಕಾರ ಇರುವುದರಿಂದ ಈ ರೀತಿ ಮಾಡ್ತೇವೆ. ಮನವಿ ಪತ್ರವನ್ನು ಡಿಸಿಗೂ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಡಕೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಮುರಳೀಧರ ರೈ ಮಠಂತಬೆಟ್ಟು, ನಿರಂಜನ ರೈ ಮಠಂತಬೆಟ್ಟು, ಸಂತೋಷ್ ಭಂಡಾರಿ, ಆದರ್ಶ ರೈ, ಉಲ್ಲಾಸ್ ಕೋಟ್ಯಾನ್, ಕೇಶವ ಭಂಡಾರಿ ಕೈಪ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News