ಸಚಿವ ಝಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಅನ್ವರ್ ಮಾಣಿಪ್ಪಾಡಿ ಆಗ್ರಹ

Update: 2019-06-13 17:05 GMT

ಮಂಗಳೂರು, ಜೂ.13: ಐಎಂಎ ಜ್ಯುವೆಲ್ಲರಿ ಬಹುಕೋಟಿ ಹಗರಣದ ರೂವಾರಿ ಮುಹಮ್ಮದ್ ಮನ್ಸೂರ್ ಖಾನ್‌ನ ನಿಕಟವರ್ತಿ ಸಚಿವ ಝಮೀರ್ ಆಹ್ಮದ್ ಖಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಆಗ್ರಹಿಸಿದ್ದಾರೆ.

ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಅಲ್ಪಸಂಖ್ಯಾತರ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ನಾಯಕರು ಇಂತಹ ಕೃತ್ಯಗಳಲ್ಲಿ ನಿರಂತರ ಭಾಗಿಯಾಗಿರುವುದು ಖಂಡನೀಯ. ಐಎಂಎ ಜ್ಯುವೆಲ್ಲರಿ ಹಗರಣದ ನೈಜ ಚಿತ್ರಣ ಹೊರಗೆ ಬರಬೇಕಾದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದರು.

ಸಚಿವ ಜಮೀರ್ ಆಹ್ಮದ್‌ಖಾನ್ ತಾನು ಮನ್ಸೂರ್‌ನಿಂದ 9 ಕೋ.ರೂ. ದೇಣಿಗೆ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರಲ್ಲದೆ, ಅದು ಜಮೀನು ಮಾರಿ ಪಡೆದ ಮೊತ್ತ ಎಂದು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಯಾವುದೇ ದಾಖಲೆಗಳು ಇಲ್ಲ. ಅಧಿಕೃತವಾಗಿ 9 ಕೋ.ರೂ. ದೇಣಿಗೆ ಪಡೆದಿರುವ ಸಚಿವರು ಅನಧಿಕೃತವಾಗಿ ದೇಣಿಗೆ ಪಡೆದಿರಲಾರರೇ? ಎಂದು ಪ್ರಶ್ನಿಸಿದರು.

 ಮಾಜಿ ಸಚಿವ ರೋಶನ್ ಬೇಗ್ ತನ್ನಿಂದ 400 ಕೋ.ರೂ. ಪಡೆದಿರುವುದಾಗಿ ಮನ್ಸೂರ್ ಹೇಳಿದ್ದಾನೆ. 2018ರ ಚುನಾವಣೆಯಲ್ಲಿ ನಾನು ಚಾಮರಾಜಪೇಟೆ ಕ್ಷೇತ್ರಕ್ಕೆ ಬಿಜೆಪಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದೆ. ಅದಾಗಲೇ ಐಎಂಎ ರೂವಾರಿ ಮತ್ತು ಜಮೀರ್ ಸಂಬಂಧಗಳ ಬಗ್ಗೆ ಶಂಕೆ ವ್ಯಕ್ತ ಪಡಿಸಿದ್ದೆ. ಚುನಾವಣೆಯಲ್ಲಿ ಆತನಿಂದ ಹಣ ಹಂಚಿಕೆಯಾಗುತ್ತಿದೆ ಎಂದಿದ್ದೆ. ಅಮಾನತ್ ಬ್ಯಾಂಕ್ ಸ್ಥಾಪಿಸುವುದಾಗಿ ಕಾಂಗ್ರೆಸ್ ನಾಯಕ ರಹ್ಮಾನ್ ಖಾನ್ ಜನತೆಗೆ ವಂಚಿಸಿರುವುದು, ವಕ್ಫ್ ಆಸ್ತಿಯ ಕಬಳಿಕೆ, ಇದೀಗ ಐಎಂಎ ಹಗರಣ ಇದೆಲ್ಲವೂ ಕಾಂಗ್ರೆಸಿಗರ ಬಣ್ಣ ಬಯಲು ಮಾಡುತ್ತಿದೆ ಎಂದು ಆರೋಪಿಸಿದರು.

ಕೇರಳ ಮೂಲಕ ಐಎಸ್‌ಐ ಜೊತೆ ಮನ್ಸೂರ್‌ಖಾನ್ ನಂಟು ಬೆಳೆಸಿದ್ದು, ಅದಕ್ಕೂ ಹಣ ಸಹಾಯ ನೀಡುತ್ತಿದ್ದ ಎಂಬ ಮಾಹಿತಿ ಇದೆ. ಈ ಬಗ್ಗೆಯೂ ಸಿಬಿಐ ತನಿಖೆ ಆಗಬೇಕಿದೆ ಎಂದ ಅನ್ವರ್ ಮಾಣಿಪ್ಪಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪಕ್ಷ ಬದ್ಧವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಮಚಂದ್ರ ಬೈಕಂಪಾಡಿ, ಸತೀಶ್ ಪ್ರಭು ಮತ್ತು ಭಾಸ್ಕರಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News