ಗ್ರಾಮಚಾವಡಿ: ತಾಜುಲ್ ಉಲಮಾ ಶರೀಅತ್ ಮಹಿಳಾ ಕಾಲೇಜು ಉದ್ಘಾಟನೆ

Update: 2019-06-13 17:07 GMT

ಕೊಣಾಜೆ, ಜೂ.13: ಇಲ್ಲಿಗೆ ಸಮೀಪದ ಗ್ರಾಮಚಾವಡಿಯಲ್ಲಿ ತಾಜುಲ್ ಉಲಮಾ ಶರೀಅತ್ ಮಹಿಳಾ ಕಾಲೇಜು ಗುರುವಾರ ಉದ್ಘಾಟನೆಗೊಂಡಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮುಡಿಪು ತಾಜುಲ್ ಉಲಮಾ ಶರೀಅತ್ ಕಾಲೇಜಿನ ಪ್ರಾಧ್ಯಾಪಕ ಲತೀಫ್ ಸಖಾಫಿ ಮಗು ಹುಟ್ಟಿದ ಬಳಿಕ ಮರಣದವರೆಗೂ ಶಿಕ್ಷಣ ಕಲಿತಷ್ಟು ಮುಗಿಯದು. ಶಿಕ್ಷಣ ಎಂದರೆ ಕೇವಲ ಲೌಕಿಕ ಮಾತ್ರ ಎನ್ನುವ ಭಾವನೆ ತೊರೆದು ಧಾರ್ಮಿಕ ಶಿಕ್ಷಣಕ್ಕೂ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಧ್ಯಾಪಕ ಅಬ್ದುಲ್ ರಹ್ಮಾನ್ ಮದನಿ ತೋಟಾಲ್ ಮಾತನಾಡಿ ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಹಿಂದೆಲ್ಲಾ ಮುಸ್ಲಿಂ ಹೆಣ್ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಇರಲಿಲ್ಲ. ಆದರೆ ಪ್ರಸ್ತುತ ದಿನಗಳಲ್ಲಿ ಹೆಣ್ಮಕ್ಕಳಿಗೂ ತಾಜುಲ್ ಉಲಮಾ ಸಂಸ್ಥೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಹರೇಕಳ ಗ್ರಾಪಂ ಅಧ್ಯಕ್ಷೆ ಅನಿತಾ ಡಿಸೋಜ ಉದ್ಘಾಟಿಸಿದರು. ತಾಜುಲ್ ಉಲಮಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ರಹ್ಮಾನ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಅಹ್ಮದ್ ಕುಂಞಿ ಕಲ್ಮಿಂಜ ಮುಖ್ಯ ಅತಿಥಿಯಾಗಿದ್ದರು.

ಶಿಕ್ಷಕಿ ಅಝ್ಮೀನಾ ಸ್ವಾಗತಿಸಿದರು. ಉಸ್ತುವಾರಿ ಕೆ.ಎಂ.ಮುಹಮ್ಮದ್ ಮದನಿ ಸಾಮಣಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News