ತೊಕ್ಕೊಟ್ಟು ಫ್ಲೈ ಓವರ್ ಅವ್ಯವಸ್ಥೆ ಸರಿಪಡಿಸಲು ಡಿವೈಎಫ್‌ಐ ಆಗ್ರಹ

Update: 2019-06-13 17:09 GMT

ತೊಕ್ಕೊಟ್ಟು, ಜೂ.13:ಹಲವು ವರ್ಷಗಳ ನಿಧಾನಗತಿಯ ಕಾಮಗಾರಿಯ ನಂತರ ತೊಕೊಟ್ಟು ಫ್ಲೈಓವರ್ ಕೆಲಸ ಪೂರ್ಣಗೊಂಡು ಗುರುವಾರದಿಂದ ವಾಹನ ಸಂಚಾರ ಆರಂಭವಾಗಿದೆ. ಆದರೆ, ಮಂಗಳೂರಿನಿಂದ ಉಳ್ಳಾಲಕ್ಕೆ ಹೋಗುವ ವಾಹನಗಳಿಗೆ ತಿರುವು ಕೊಡುವಲ್ಲಿ ಸಮರ್ಪಕ ವ್ಯವಸ್ಥೆ ಮಾಡದಿರುವ ಕಾರಣ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಗಮನಹರಿಸಿ ತೊಕ್ಕೊಟ್ಟುವಿನಿಂದ ಉಳ್ಳಾಲಕ್ಕೆ ಹೋಗಲು ಸಮರ್ಪಕ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಉಳ್ಳಾಲ ವಲಯ ಡಿವೈಎಫ್‌ಐ ಆಗ್ರಹಿಸಿದೆ.

ಈ ಭಾಗದ ವಾಹನ ಸವಾರರ ಬಹುದಿನಗಳ ಬೇಡಿಕೆಯಾದ ತೊಕ್ಕೊಟ್ಟು ಫ್ಳೈಓವರ್ ಕಾಮಗಾರಿ ಪೂರ್ಣಗೊಳಿಸುವಂತೆ ಡಿವೈಎಫ್‌ಐ ಹೋರಾಟಗಳನ್ನು ನಡೆಸುತ್ತಾ ಬಂದಿತ್ತು. ಫ್ಳೈ ಓವರ್ ಪೂರ್ಣಗೊಂಡಿದ್ದರೂ ಕೂಡ ಅವೈಜ್ಞಾನಿಕ ರೀತಿಯ ಕಾಮಗಾರಿಗೆ ಫ್ಲೈ ಓವರ್ ನಿರ್ಮಿಸಿದ ನವಯುಗ ಸಂಸ್ಥೆ, ಅವೈಜ್ಞಾನಿಕ ನೀಲನಕ್ಷೆಯ ಬಗ್ಗೆ ಚಕಾರ ಎತ್ತದ ಸಂಸದರು ಹಾಗೂ ಈ ಭಾಗದ ಶಾಸಕರು ನೇರ ಹೊಣೆಯಾಗಿದ್ದಾರೆ. ಈಗ ಕಾಮಗಾರಿ ಪೂರ್ಣಗೊಂಡ ನಂತರ ಸಚಿವ ಯು.ಟಿ. ಖಾದರ್ ಈ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಹೇಳಿಕೆ ನೀಡುತ್ತಿರುವುದು ರಾಜಕೀಯ ಗಿಮಿಕ್ ಆಗಿದೆ. ಪ್ರತೀ ದಿನ ತಾವು ಒಡಾಡುವ ರಸ್ತೆಯ ಮಧ್ಯದಲ್ಲೆ ಈ ಕಾಮಗಾರಿ ನಡೆಯುತ್ತಿದ್ದರೂ ಇಷ್ಟು ದಿನ ಸುಮ್ಮನೇ ಇದ್ದು ಈಗ ಏಕಾಏಕಿ ಇಂತಹ ಹೇಳಿಕೆ ಕೊಟ್ಟು ರಾಜಕೀಯ ಲಾಭ ಪಡೆಯುವ ಬದಲು ಈ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕು ಎಂದು ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News