ವಿದ್ಯಾರ್ಥಿಗೆ ಹಾವು ಕಚ್ಚಿ ಅಸ್ವಸ್ಥ

Update: 2019-06-13 17:16 GMT

ಮಂಗಳೂರು, ಜೂ.13: ಗುರುಪುರ ಕೈಕಂಬದ ಕಂದಾವರದ ಪೊಂಪೈ ಚರ್ಚಿನ ಕನ್ನಡ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಆದರ್ಶ ಎಂಬಾತಗೆ ಬುಧವಾರ ಕನ್ನಡಿ ಹಾವು(ಕಂದೊಡಿ) ಕಚ್ಚಿದ್ದು, ಅಸ್ವಸ್ಥಗೊಂಡಿದ್ದಾನೆ.

ಈತ ಸ್ಥಳೀಯ ಪಡ್ಡಾಯಿಪದವಿನ ನಿವಾಸಿಯಾಗಿದ್ದಾನೆ.

ಬುಧವಾರ ಬೆಳಗ್ಗೆ ಹಾವು ಕಚ್ಚಿದ್ದು, ತಕ್ಷಣ ಶಿಕ್ಷಕರು ಬಾಲಕನನ್ನು ಗಂಜಿಮಠದ ಬಿಗ್ ಬ್ಯಾಗ್ ಬಳಿಯಲ್ಲಿರುವ ನಾಟಿ ವೈದ್ಯ ಸುರೇಶ್ ಎಂಬವರಲ್ಲಿಗೆ ಕೊಂಡೊಯ್ದರು. ವಿಷಕ್ಕೆ ಮದ್ದು ನೀಡಿದ ಅವರು, ‘ಏನಾಗುವುದಿಲ್ಲ’ ಎಂದು ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದರು.

ಮಧ್ಯಾಹ್ನದ ಹೊತ್ತಿಗೆ ಬಾಲಕನ ಕಾಲು ಊದ ತೊಡಗಿತು. ನೋವು ಮತ್ತು ವಿಷವೇರುತ್ತಲೇ ಬಾಲಕ ವಾಂತಿ ಮಾಡಲಾರಂಭಿಸಿದ. ಗಾಬರಿಗೊಂಡ ತಂದೆ ಸುರೇಶ್ ಮತ್ತು ತಾಯಿ ಜಯಶ್ರೀ ಪುತ್ರನನ್ನು ಬೆಡಗಬೆಳ್ಳೂರಿನ ನಾಟಿವೈದ್ಯರ ಜನಾರ್ದನ ಎಂಬವರ ಕೊಳತ್ತಮಜಲಿನ ಚಿಕಿತ್ಸಾಲಯಕ್ಕೆ ಕರೆದೊಯ್ದರು.

ಬಾಲಕನಿಗೆ ಕಚ್ಚಿದ ಕನ್ನಡಿಹಾವನ್ನು ಶಿಕ್ಷಕರು ಹಿಡಿದು, ಡಬ್ಬದಲ್ಲಿ ಹಾಕಿ ಜನಾರ್ದನರ ಬಳಿಗೆ ಕಳುಹಿಸಿಕೊಟ್ಟಿದ್ದರು. ಹಾವಿನ ಗುರುತು ಪತ್ತೆ ಹಚ್ಚಿದ ಜನಾರ್ದನರು ಪರಿಣಾಮಕಾರಿ ಚಿಕಿತ್ಸೆ ನೀಡಿದರು. ರಾತ್ರಿ ಹೊತ್ತಿಗೆ ಬಾಲಕ ಸುಧಾರಿಸಿದ್ದು, ಶುಕ್ರವಾರ ಮನೆಗೆ ಕಳಹಿಸಿಕೊಡಲಾಗುವುದು ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News