ಸೋಮೇಶ್ವರ, ಉಚ್ಚಿಲ ಕಡಲ್ಕೊರೆತ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಭೇಟಿ
ಉಳ್ಳಾಲ: ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಉಚ್ಚಿಲ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಗುರುವಾರ ಅವರು ಕಡಲ್ಕೊರೆತ ಪೀಡಿತ ಉಚ್ಚಿಲ ಪ್ರದೇಶಕ್ಕೆ ಭೇಟಿ ನೀಡಿದರು. ಕಡಲು ಪಾಲಿನ ಅಂಚಿನಲ್ಲಿರುವ ಕೋಟೆಬೈಲ್ ವಿಶ್ವನಾಥ್, ಅಬ್ದುಲ್ಲಾ,ನಾಗೇಶ್ ಅವರ ಮನೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು ಕಡಲ್ಕೊರೆತ ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಸರಕಾರವು ಪ್ರತೀ ವರುಷವೂ ಅನುದಾನಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ತಾಂತ್ರಿಕವಾದ ಸಮರ್ಪಕ ವ್ಯವಸ್ಥೆ ಇಲ್ಲದೆ ಶಾಶ್ವತ ಪರಿಹಾರ ಸಾಧ್ಯವಾಗುತ್ತಿಲ್ಲ.ಶಾಶ್ವತ ಯೋಜನೆಯಡಿ ಹೊಸ ವೈಜ್ನಾನಿಕ ಯೋಜನೆಯ ಅನುಷ್ಠಾನ ಪೂರ್ಣವಾಗದ ಕಾರಣ ಕಡಲ್ಕೊರೆತಗಳು ಮರುಕಳಿಸುತ್ತಿವೆ. ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರಗಳ ಬಗ್ಗೆ ನಾಳೆಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.
ತುರ್ತು ಸಹಾಯಕ್ಕಾಗಿ ಎರಡು ಕಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗುವುದು,ಮತ್ತು ರಾಜ್ಯ ಮತ್ತು ಕೇಂದ್ರ ಸರಕಾರಗಳ ಯೋಜನೆಗಳಡಿಯಲ್ಲಿ ಕಡಲ್ಕೊರೆತ ಸಂತ್ರಸ್ತರನ್ನು ಶಾಶ್ವತವಾಗಿ ಬೇರೆಡೆ ಸ್ಥಳಾಂತರಿಸುವ ಬಗ್ಗೆ ಯೋಜನೆ ನಿರ್ಮಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಸಂಸದರಿಂದ ತಹಶೀಲ್ದಾರ್ ಗುರುಪ್ರಸಾದ್ , ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಕಳೆದ ಬಾರಿ ಉಚ್ಚಿಲ ತೀರ ಪ್ರದೇಶಗಳಲ್ಲಿ ಕಡಲ್ಕೊರೆತ ತಡೆಗೆ ಬಂಡೆಕಲ್ಲುಗಳನ್ನು ಹಾಕಲಾಗಿತ್ತು.ಮತ್ತಷ್ಟು ಕಲ್ಲುಗಳನ್ನು ತಂದು ಹಾಕುವುದರ ಬದಲಿಗೆ , ಹಾಕಿದ ಕಲ್ಲುಗಳನ್ನೇ ಮತ್ತೆ ರೀಸೆಟ್ ಮಾಡುವ ಅವೈಜ್ನಾನಿಕ ಕಾಮಗಾರಿ ನಡೆಸಲಾಯಿತು.ಬ್ರೇಕ್ ವಾಟರ್ ಕಾಮಗಾರಿಯಡಿ ಉಚ್ಚಿಲ ಪ್ರದೇಶದಲ್ಲಿ 10 ಕಡೆ ಬರ್ಮ್ಸ್ ಹಾಕಬೇಕಿತ್ತಾದರೂ ಬರೀ ಎರಡು ಕಡೆಗಳಲ್ಲಿ ಮಾತ್ರ ಬರ್ಮ್ಸ್ ಹಾಕಿದರ ಪರಿಣಾಮ ಮತ್ತೆ ಕಡಲ್ಕೊರೆತ ತೀವ್ರಗೊಂಡಿದೆ.
- ರವಿಶಂಕರ್, ತಾ.ಪಂ.ಸದಸ್ಯರು
ಕಳೆದ 17 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇನೆ..ಇಷ್ಟು ಸಮಯದಲ್ಲಿ ಇಂತಹ ಸಮಸ್ಯೆ ಎದುರಾಗಿರಲಿಲ್ಲ. ಇದೀಗ ನಮ್ಮ ಮನೆ ಕುಸಿಯುವ ಹಂತದಲ್ಲಿದೆ..ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ನಾವು ಮುಂದೇನು ಮಾಡುವುದು ಎಂದು ತಿಳಿಯದು. ಮನೆಯೊಳಗಿನ ವಸ್ತುಗಳನ್ನು ಖಾಲಿ ಮಾಡಿದ್ದೇವೆ. ಸದ್ಯಕ್ಕೆ ಪತ್ನಿ ಮತ್ತು ಮಕ್ಕಳು ನೆಂಟರ ಮನೆಗೇ ಹೋಗಬೇಕಿದೆ.
- ಅಬ್ದುಲ್ಲಾ , ಉಚ್ಚಿಲ ಕೋಟೆ ನಿವಾಸಿ