ಮತ್ತೆ ಸ್ಥಳೀಯರಿಗೆ ಟೋಲ್ ಬಿಸಿ: ವಿರೋಧದ ಬಳಿಕ ಟೋಲ್ ಸಂಗ್ರಹ ಸ್ಥಗಿತ

Update: 2019-06-13 17:24 GMT

ಪಡುಬಿದ್ರಿ: ಹೆಜಮಾಡಿಯಲ್ಲಿರುವ ನವಯುಗ ಟೋಲ್‍ನಲ್ಲಿ ಸ್ಥಳೀಯರಿಗೆ ಗುರುವಾರ ಬೆಳಗ್ಗೆಯಿಂದ ಟೋಲ್ ಆರಂಭಿಸಿದ್ದು, ವಿರೋಧ ಬಳಿಕ ಟೋಲ್ ಸಂಗ್ರಹವನ್ನು ನಿಲ್ಲಿಸಲಾಗಿದ್ದು, ಶುಕ್ರವಾರ ಸಭೆ ನಡೆಯಲಿದೆ. 

ಆರು ತಿಂಗಳ ಹಿಂದೆ ಉಡುಪಿ ಜಿಲ್ಲಾ ವಾಹನಗಳಿಗೆ ಟೋಲ್ ಸಂಗ್ರಹವನ್ನು ನವಯುಗ ಕಂಪೆನಿಯ ಟೋಲ್‍ನಲ್ಲಿ ಆರಂಭಿಸಲಾಗಿತ್ತು. ಆದರೆ ಈ ವೇಳೆ ಪಡುಬಿದ್ರಿ ಸಹಿತ ವಿವಿಧ ಕಡೆಗಳಲ್ಲಿ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ನಡೆಸದಂತೆ ಗ್ರಾಮಸ್ಥರು ಆಗ್ರಹಿಸಿದ್ದರು.

ಬಳಿಕ ಹೆದ್ದಾರಿ ಟೋಲ್ ವಿರೋಧಿ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಉಡುಪಿ ಜಿಲ್ಲಾ ರಕ್ಷಣಾ ವೇದಿಕೆಯು ಒಂದು ತಿಂಗಳ ಪ್ರತಿಭಟನೆಯನ್ನೂ ನಡೆಸಿತ್ತು.  ವಿರೋಧದ ಬಳಿಕ ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಟೋಲ್ ಸಂಗ್ರಹವನ್ನು ಪಡುಬಿದ್ರಿ ವ್ಯಾಪ್ತಿಗೆ ಟೋಲ್ ಸಂಗ್ರಹದಲ್ಲಿ ವಿನಾಯಿತಿ ನೀಡಲಾಗಿತ್ತು. ಇದೀಗ ಗುರುವಾರ ಬೆಳಗ್ಗೆಯಿಂದ ಮತ್ತೆ ಟೋಲ್ ಸಂಗ್ರಹವನ್ನು ಆರಂಭಿಸಿತು. ವಿಷಯ ತಿಳಿದ ವಿವಿಧ ಸಂಘಟನೆಗಳು ಹಾಗೂ ಸ್ಥಳೀಯರು ಟೋಲ್ ವಸೂಲಿಗೆ ವಿರೋಧ ವ್ಯಕ್ತಪಡಿಸಿದರು. ಪಡುಬಿದ್ರಿಯ ಕಲ್ಸಂಕ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿ ಪೂರ್ಣಗೊಳ್ಳದೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹ ಮಾಡುವುದು ಸರಿಯಲ್ಲ. ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಟೋಲ್ ಆರಂಭಿಸಲಿ ಎಂಬುವುದು ಹೋರಾಟಗಾರ ಆಸೀಫ್ ಆಪದ್ಬಾಂಧವ  ತಿಳಿಸಿದ್ದಾರೆ. 

ಸಭೆ: ಸ್ಥಳೀಯರು ಟೋಲ್ ಸಂಗ್ರಹವನ್ನು ವಿರೋಧ ವ್ಯಕ್ತಪಡಿಸಿದ ಬಳಿಕ ಟೋಲ್ ಸಂಗ್ರಹವನ್ನು ನಿಲ್ಲಿಸಲಾಯಿತು. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಸ್ಥಳೀಯರು ಹಾಗೂ ಟೋಲ್ ಅಧಿಕಾರಿಗಳ ಸಭೆ ನಡೆಯಲಿದ್ದು, ಅದುವರೆಗೂ ಟೋಲ್ ಸಂಗ್ರಹವನ್ನು ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News