ಉಳ್ಳಾಲದಲ್ಲಿ ಕಡಲ್ಕೊರೆತದ ಅಬ್ಬರ: ಆತಂಕದಲ್ಲಿ ಜನತೆ
ಉಳ್ಳಾಲ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಉಳ್ಳಾಲ, ಸೋಮೇಶ್ವರ, ಉಚ್ಚಿಲ ವ್ಯಾಪ್ತಿಯಲ್ಲಿ ಕಡಲು ಪ್ರಕ್ಷುಬ್ದಗೊಂಡು ಅಲೆಗಳ ಅಬ್ಬರಕ್ಕೆ ಹಲವಾರು ಮನೆಗಳು ಕುಸಿದಿದ್ದು ಕಡಲ ತಡಿಯ ಜನರ ಆತಂಕ ಮುಂದುವರಿದಿದೆ.
ಉಳ್ಳಾಲದ ಕಿಲೇರಿಯಾ ನಗರದಲ್ಲಿ ಐದು ಮನೆಗಳು ಬಹುತೇಕ ಸಮುದ್ರಪಾಲಾಗಿವೆ, ಹಾಗೇಯೇ ಕೈಕೋ, ಉಚ್ಚಿಲ ಬೆಟ್ಟಂಪಾಡಿ, ಕೋಟೆ, ಸೋಮೇಶ್ವರ ಸೇರಿದಂತೆ ಕಡಲ ತಡಿಯ ಹಲವಾರು ಮನೆಗಳು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹಾನಿಗೊಂಡಿವೆ. ಗುರುವಾರವೂ ಕಡಲ್ಕೊರೆತದಿಂದಾಗಿ ಹಲವು ಮನೆಗಳು ಕುಸಿದಿದ್ದು, ತೆಂಗಿನಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಗುರುವಾರ ಉಚ್ಚಿಲದಲ್ಲಿ ಹಾನಿಗೊಂಡಿರುವ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ನೀಡಿ ಅವಲೋಕನ ನಡೆಸಿ ಶಾಶ್ವತ ಪರಿಹಾರ ಕ್ರಮದ ಬಗ್ಗೆ ಭರವಸೆ ನೀಡಿದ್ದಾರೆ. ಆದರೆ ಸಂಸದರು ಉಳ್ಳಾಲ ಭಾಗದ ಕಿಲೇರಿಯಾನಗರ ಸೇರಿದಂತೆ ಹಲವಾರು ಪ್ರದೇಶಕ್ಕೆ ಭೇಟಿ ನೀಡದೆ ಕೇವಲ ಉಚ್ಚಿಲಕ್ಕೆ ಮಾತ್ರ ಭೇಟಿ ನೀಡಿದ್ದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಉಳ್ಳಾಲ, ಸೊಮೇಶ್ವರ ಪ್ರದೇಶಕ್ಕೆ ಗುರುವಾರದಂದು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್, ತಹಶೀಲ್ದಾರ್ ಗುರುಪ್ರಸಾದ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.