ಹಿರಿಯ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ಭಟ್ ನಿಧನ

Update: 2019-06-13 17:37 GMT

ಬಂಟ್ವಾಳ: ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗುರು ಕುಡಾನ ಗೋಪಾಲಕೃಷ್ಣ ಭಟ್ (81) ರವರು ನಿಧನರಾಗಿದ್ದಾರೆ. ಬಂಟ್ವಾಳ ತಾಲೂಕಿನ ಗಡಿಪ್ರದೇಶವಾದ ಬೆರಿಪದವು ಸಮೀಪದ ಕುಡಾನ ಎಂಬ ಸಣ್ಣ ಹಳ್ಳಿಯ ನಿವಾಸಿಯಾಗಿದ್ದ ಇವರು ಪೆರುವಡಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆಯುತ್ತಿರುವ ಸಂದರ್ಭದಲ್ಲೇ ಯಕ್ಷಗಾನದತ್ತ ಒಲವು ಬೆಳೆಸಿಕೊಂಡವರು.

ಪೆರುವಡಿ ನಾರಾಯಣ ಭಟ್ಟರಿಂದ ಪ್ರಾಥಮಿಕ ಹೆಜ್ಜೆಗಾರಿಕೆಯನ್ನೂ, ಕೋಳ್ಯೂರು ರಾಮಚಂದ್ರ ರಾಯರಿಂದ ಇನ್ನೂ ಹೆಚ್ಚಿನ ಪರಿಣತಿಯನ್ನು ಪಡೆದುಕೊಂಡು ಅರ್ಥಗಾರಿಕೆ, ನಾಟ್ಯ, ರಂಗತಂತ್ರಾದಿಗಳನ್ನು ಕುರಿಯ ವಿಠಲ ಶಾಸ್ತ್ರಿಗಳಿಂದ ಕರಗತ ಮಾಡಿಕೊಂಡಿದ್ದರು.

1950 ರಲ್ಲಿ ಧರ್ಮಸ್ಥಳ ಮೇಳದ ಮೂಲಕ ಯಕ್ಷ ವೃತ್ತಿಬದುಕು ಆರಂಭಿಸಿದ ಇವರು ಪುಂಡುವೇಷದ ಮೂಲಕ ಹೆಚ್ಚು ಪ್ರಸಿದ್ದಿಗೆ ಬಂದರು.ಇವರ ಪರಶುರಾಮ, ಕೃಷ್ಣ, ಬಭ್ರುವಾಹನ, ಪ್ರಹ್ಲಾದ, ಅಭಿಮನ್ಯು ಮೊದಲಾದ ಪಾತ್ರಗಳ ಮೂಲಕ ಯಕ್ಷಪ್ರೇಮಿಗಳಿಗೆಹೆಚ್ಚು ಹತ್ತಿರವಾಗಿದ್ದರು. ಧರ್ಮಸ್ಥಳ, ಮೂಲ್ಕಿ, ಇರಾ, ಕೂಡ್ಲು, ಸುಂಕದಕಟ್ಟೆ, ಹಾಗೂ ಕಟೀಲು ಮೇಳಗಳು ಸಹಿತ ಒಟ್ಟು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಯಕ್ಷರಂಗದಲ್ಲಿ ಮೆರೆದಿದ್ದರು.

ಇವರ ಕಲಾಸಾಧನೆಗೆ ಹಲವಾರು ಗೌರವ, ಸನ್ಮಾನಗಳು ದೊರೆತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News