ತನ್ನದೇ ಮರ್ಸಿಡೀಸ್ ಕಾರನ್ನು ಕದ್ದ ರಿಯಲ್ ಎಸ್ಟೇಟ್ ಉದ್ಯಮಿ!: ಕಾರಣವೇನು ಗೊತ್ತಾ?

Update: 2019-06-14 09:42 GMT

ಹೊಸದಿಲ್ಲಿ, ಜೂ.14: ವಿಮಾ ಹಣ ಪಡೆಯುವ ಸಲುವಾಗಿ ತನ್ನದೇ ಮರ್ಸಿಡಿಸ್ ಕಾರನ್ನು ದಿಲ್ಲಿಯ ಉದ್ಯಮಿಯೊಬ್ಬ ಕದ್ದ ವಿಚಿತ್ರ ಘಟನೆ ವರದಿಯಾಗಿದೆ. ಈ ಸಂಬಂಧ ದಿಲ್ಲಿಯ 62 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ರಾಮ್‌ಲಾಲ್ ಧವನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 25ರಂದು ಧವನ್ ತನ್ನ ಇಬ್ಬರು ಪರಿಚಿತರಾದ ಝುಲ್ಫಿಕರ್ ಅಬ್ದುಲ್ ವಖೀಲ್ ಅಹ್ಮದ್ ಹಾಗೂ ಲಾಲ್ ಬಹಾದ್ದೂರ್ ಸಿಂಗ್ ಎಂಬವರನ್ನು ಸಂಪರ್ಕಿಸಿ ತನ್ನ ಮುಂಬೈಯಲ್ಲಿನ ಸ್ನೇಹಿತನಿಗೆ ಮರ್ಸಿಡಿಸ್ ಕಾರು ಬೇಕಾಗಿರುವುದರಿಂದ ಅದನ್ನು ಮುಂಬೈಗೆ ಸಾಗಿಸುವಂತೆ ಹೇಳಿ ಅವರಿಗೆ ಆರ್‌ಎಕೆ ಮಾರ್ಗ್ ನಲ್ಲಿರುವ ಸಮುದಾಯ ಲಾಡ್ಜ್ ನಲ್ಲಿ ತಂಗುವಂತೆ ಸೂಚಿಸಿದ್ದ. ಮೇ 26ರ ಅಪರಾಹ್ನ ಅವರು ಕಾರಿನೊಂದಿಗೆ ಮುಂಬೈ ತಲುಪಿ ಆ ನಿರ್ದಿಷ್ಟ ಲಾಡ್ಜ್ ನಲ್ಲಿ ತಂಗಿದ್ದರು. ನಂತರ ಕಂಪೌಂಡ್ ನಲ್ಲಿ ಕಾರನ್ನು ನಿಲ್ಲಿಸಿ ಊರು ಸುತ್ತಿದ್ದರು. ಅವರು ಸಂಜೆ ಬಂದಾಗಲೂ ಕಾರು ಅಲ್ಲೇ ಇತ್ತಾದರೂ ಮರುದಿನ ಬೆಳಗ್ಗೆ ಅದು ಅಲ್ಲಿಂದ ನಾಪತ್ತೆಯಾಗಿತ್ತು.

ಅಹ್ಮದ್ ಹಾಗೂ ಸಿಂಗ್ ಕಾರು ನಾಪತ್ತೆಯಾದ ಬಗ್ಗೆ ಧವನ್ ಗೆ ತಿಳಿಸಿದಾಗ ಪೊಲೀಸ್ ದೂರು ನೀಡಲು ಆತ ನೀಡಿದ ಸಲಹೆಯಂತೆ ಅವರು ಆರ್‌ಎಕೆ ಮಾರ್ಗ್ ಠಾಣೆಯಲ್ಲಿ ಮೇ 27ರಂದು ದೂರು ದಾಖಲಿಸಿದ್ದರು. ಆದರೆ ಅವರು ಹೇಳಿದ ಕಥೆ ಪೊಲೀಸರಿಗೆ ಸಂಶಯ ಮೂಡಿಸಿ ಅವರು ನಗರದ ಮರ್ಸಿಡಿಸ್ ಶೋರೂಂ ಸಂಪರ್ಕಿಸಿದಾಗ ಈ ಕಾರನ್ನು ಕೇವಲ ಒಂದು ಕೀ ಬಳಸಿ ತೆರೆಯಬಹುದೆಂದು ಮಾಹಿತಿ ಪಡೆದುಕೊಂಡಿದ್ದರು. ಧವನ್ ಇತ್ತೀಚೆಗೆ ಕಾರಿನ ಇನ್ನೊಂದು ಸೆಟ್ ಕೀ ತರಿಸಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು.

ನಂತರ ಪೊಲೀಸರು ಹತ್ತಿರದ ಟೋಲ್ ಪ್ಲಾಝಾಗಳ ಸಿಸಿಟಿವಿ ದೃಶ್ಯಗಳನ್ನು ಪರೀಶೀಲಿಸಿದಾಗ ಧವನ್ ಈ ಕಾರನ್ನು ಮೇ 27ರಂದು ಮುಂಬೈ ಹೊರಗೆ ಚಲಾಯಿಸಿಕೊಂಡು ಹೋಗುವುದು ಕಾಣಿಸಿತ್ತು. ಕೂಡಲೇ ಮುಂಬೈ ಪೊಲೀಸರು ದಿಲ್ಲಿಗೆ ತೆರಳಿ ಆತನನ್ನು ಬಂಧಿಸಿ ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನಿಗೀಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News