×
Ad

ದೇಶದಲ್ಲಿ ಪ್ರತೀ ವರ್ಷ 2.50 ಕೋಟಿ ಯುನಿಟ್ ರಕ್ತದ ಕೊರತೆ

Update: 2019-06-14 18:12 IST

ಮಂಗಳೂರು, ಜೂ.14: ದೇಶದಲ್ಲಿ ಪ್ರತಿ ವರ್ಷ 5 ಕೋಟಿ ಯುನಿಟ್ ರಕ್ತದ ಆವಶ್ಯಕತೆಯಿದೆ. ಆದರೆ ನಮ್ಮಲ್ಲಿ ಕೇವಲ 2.50 ಕೋಟಿ ಯುನಿಟ್ ರಕ್ತ ಮಾತ್ರ ಸಂಗ್ರಹವಾಗುತ್ತಿದೆ. ಉಳಿದ 2.50 ಕೋಟಿ ಯುನಿಟ್ ರಕ್ತದ ಕೊರತೆಯಿಂದ ನಾನಾ ಸಮಸ್ಯೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಯುವ ಸಮೂಹ ರಕ್ತದಾನ ಮಾಡಲು ಮುಂದೆ ಬರಬೇಕಿದೆ ಎಂದು ನಿಟ್ಟೆ ಯುನಿವರ್ಸಿಟಿಯ ಉಪಕುಲಪತಿ ಡಾ. ಸತೀಶ್ ಭಂಡಾರಿ ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಶಾಖೆಯ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶುಕ್ರವಾರ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೃತಕ ಅಂಗಾಂಗಗಳ ಜೋಡಣೆ, ಅಂಗಾಂಗಗಳ ವರ್ಗಾವಣೆ ಸಹಿತ ದೇಹದ ಯಾವುದೇ ಭಾಗಗಳಿಗೆ ಸಮಸ್ಯೆಯಾದರೆ ಅದನ್ನು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಬದಕುಬಹುದು. ಆದರೆ ಕೃತಕ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನದಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರಕ್ತದಾನದಲ್ಲಿ ಇನ್ನಷ್ಟು ಜನರು ಪಾಲ್ಗೊಳ್ಳಬೇಕು. ಇದೊಂದು ಚಳವಳಿ, ಅಭಿಯಾನ ಮಾದರಿಯಲ್ಲಿ ನಡೆಯಬೇಕೆಂದು ಡಾ. ಸತೀಶ್ ಭಂಡಾರಿ ನುಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟಾಚಲಪತಿ ಕಾರ್ಯಕ್ರಮ ಉದ್ಘಾಟಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಶಾಖೆ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಅತ್ಯಧಿಕ ಬಾರಿ ರಕ್ತದಾನ ಮಾಡಿದ ಡಾ.ಸುದೇಶ್ ಶಾಸೀ ಕುಟುಂಬ ಹಾಗೂ ಅಬೂಬಕರ್ ಕುಟುಂಬವನ್ನು ಗೌರವಿಸಲಾಯಿತು. ಅಲ್ಲದೆ 15ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಮತ್ತು ಅತ್ಯಂತ ಹೆಚ್ಚು ಬಾರಿ ರಕ್ತದಾನ ಶಿಬಿರ ಆಯೋಜಿಸಿದ ಸಂಘಟಕರನ್ನೂ ಸನ್ಮಾನಿಸಲಾಯಿತು.

ಯುವ ರೆಡ್‌ಕ್ರಾಸ್ ಸಂಸ್ಥೆಯ ಯುವಕ-ಯುವತಿಯರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಬಸ್ರೂರು ರಾಜೀವ್ ಶೆಟ್ಟಿ ಪ್ರತಿಜ್ಞೆ ಬೋಧಿಸಿದರು.

ಮಂಗಳೂರು ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕಿ ಡಾ. ಸವಿತಾ, ಆರ್‌ಎಂಒ ಡಾ. ದುರ್ಗಾಪ್ರಸಾದ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಉಪಸ್ಥಿತರಿದ್ದರು.

ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News