ಕಿನ್ಯ ಗ್ರಾಪಂ: ವ್ಯಾಪ್ತಿಯಲ್ಲಿ ಗಬ್ಬೆದ್ದು ನಾರುತ್ತಿರುವ ರಸ್ತೆ; ಆರೋಪ

Update: 2019-06-14 12:50 GMT

ಉಳ್ಳಾಲ, ಜೂ.14: ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯೊಂದಿಗೆ ಕಿನ್ಯ ಗ್ರಾಪಂ ವ್ಯಾಪ್ತಿಯ ಮುಖ್ಯರಸ್ತೆಗಳಲ್ಲಿ ತ್ಯಾಜ್ಯ ತುಂಬಿದ್ದರೂ ವಿಲೇವಾರಿ ಮಾಡದೆ ಗ್ರಾಪಂ ಆಡಳಿತ ತೀರಾ ನಿರ್ಲಕ್ಷ್ಯ ತೋರಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಕಿನ್ಯ ಗ್ರಾಪಂ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗಿದ್ದರೂ ಗ್ರಾಪಂ ಗಂಭೀರವಾಗಿ ಪರಿಗಣಿಸಿರಲೇ ಇಲ್ಲ. ಇದೀಗ ನಾಟೆಕಲ್‌ನಿಂದ ಸಂಕೇಶ್‌ವರೆಗೆ ತೋಡಿನಲ್ಲಿ ಕೊಳೆತು ನಾರುತ್ತಿದ್ದ ತ್ಯಾಜ್ಯ ಮುಖ್ಯ ರಸ್ತೆಯಲ್ಲೇ ನೀರಿನೊಂದಿಗೆ ಹರಿದು ಹೋಗಿದೆ. ಅಲ್ಲದೆ ತಗ್ಗುಪ್ರದೇಶದ ಮನೆಗಳ ಆವರಣವನ್ನೂ ಸೇರಿಕೊಂಡಿದೆ ಎನ್ನಲಾಗಿದೆ.

ಈ ತ್ಯಾಜ್ಯದಿಂದ ಸ್ಥಳೀಯವಾಗಿ ರೋಗಭೀತಿ ಹರಡಿದ್ದು ಶಾಲೆಗೆ ಹೋಗುವ ಮಕ್ಕಳು, ಸಾರ್ವಜನಿಕರು ನಡೆದಾಡಲೂ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕಿನ್ಯ ಗ್ರಾಪಂ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದ್ದರೂ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತಾಳಿದ್ದಾರೆ ಎನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಈ ಪ್ರದೇಶದ ಸಮೀಪದಲ್ಲೇ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಿರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕಿದ್ದ ಗ್ರಾಪಂ ಸ್ವಚ್ಛತೆಯನ್ನು ಕಡೆಗಣಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿನ್ಯ ಗ್ರಾಪಂ ಅಧ್ಯಕ್ಷೆ ಮಾಲಿನಿ ‘ರಸ್ತೆಯಲ್ಲಿ ತ್ಯಾಜ್ಯ ಹರಿಡಿರುವ ಬಗ್ಗೆ ಮಾಹಿತಿ ಇದೆ. ಸೋಮವಾರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News