ಸಜೀಪನಡುವಿನಲ್ಲಿ ಸ್ವಚ್ಛಮೇವ ಜಯತೇ ಕಾರ್ಯಕ್ರಮಕ್ಕೆ ಚಾಲನೆ

Update: 2019-06-14 12:54 GMT

ಬಂಟ್ವಾಳ, ಜೂ. 14: ದ.ಕ.ಜಿಪಂ, ಬಂಟ್ವಾಳ ತಾಪಂ ಸಹಯೋಗದಲ್ಲಿ ಸಜಿಪನಡು ಗ್ರಾಪಂ ಆಶ್ರಯದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವಾದ ಸ್ವಚ್ಛಮೇವ ಜಯತೇ ಕಾರ್ಯಕ್ರಮಕ್ಕೆ ಸಜಿಪನಡು ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು.

ಸಜೀಪನಡು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಬರದಂತಹ ಅನೇಕ ಮಾರಕ ಕಾಯಿಲೆಗಳು ಈಗ ಕಂಡು ಬರುತ್ತಿದ್ದು, ಪರಿಸರದ ನಿರ್ಲಕ್ಷವೇ ಇದಕ್ಕೆ ಮುಖ್ಯ ಕಾರಣ. ಸ್ವಚ್ಛತೆ ಇದ್ದಲ್ಲಿ ಮಾತ್ರ ಆರೋಗ್ಯ, ಸಮಾಜ ಸುಧಾರಣೆ ಸಾಧ್ಯ ಎಂದರು. 

ದೇಶದ ಅಭಿವೃದ್ಧಿಗೆ ಸ್ವಚ್ಛತೆಯೂ ಒಂದು ಕಾರಣ. ಮಕ್ಕಳು ಈಗಿನಿಂದಲೇ ಸ್ವಚ್ಛಪರಿಸರ, ಸ್ವಚ್ಛಗ್ರಾಮ, ಸ್ವಚ್ಛರಾಜ್ಯ ಸ್ವಚ್ಛದೇಶ ಎಂಬ ಪರಿಕಲ್ಪನೆಯಲ್ಲಿದ್ದಾಗ ನಮ್ಮ ದೇಶ ಸ್ವಚ್ಛ ಭಾರತವಾಗುತ್ತದೆ ಎಂದು ಹೇಳಿದರು.

ದ.ಕ.ಜಿಪಂ ಸ್ವಚ್ಛ ನೆರವು ಘಟಕದ ಸಂಯೋಜಕಿ ಮಂಜುಳಾ ಚಾಲನೆ ನೀಡಿ ಮಾತನಾಡಿ, ಗ್ರಾಮದ ಸ್ವಚ್ಛತೆ ಕೇವಲ ಗ್ರಾಮ ಪಂಚಾಯತ್‍ನಿಂದ ಸಾಧ್ಯವಿಲ್ಲ ಗ್ರಾಮ ಪಂಚಾಯತ್‍ನೊಂದಿಗೆ ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮುಖ್ಯವಾಗಿ ಗ್ರಾಮಸ್ಥರು ಕೈ ಜೋಡಿಸಿದರೆ ಮಾತ್ರ ಗ್ರಾಮ ಸ್ವಚ್ಛವಾಗುತ್ತದೆ ಎಂದು ತಿಳಿಸಿದರು.

ಜೂ. 15ರಿಂದ ಪ್ರತಿ ಶಾಲೆಯಲ್ಲಿ ಸ್ವಚ್ಛತೆ ಬಗ್ಗೆ ಪ್ರತಿಜ್ಞಾ ವಿಧಿ, ಪ್ರಬಂಧ ಸ್ಪರ್ಧೆ, ಶ್ರಮದಾನ, ಸಭೆ, ಬೀದಿನಾಟಕ, ಆರೋಗ್ಯ ಜಾಗೃತಿಗಳು ನಡೆಯಲಿವೆ.

ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಸುನೀತಾ ಶಾಂತಿ ಮೋರಾಸ್, ಸದಸ್ಯರಾದ ಸುರೇಶ್, ಬೀಫಾತುಮ್ಮ, ಸಿಸಿಲಿಯಾವಾಸ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಪುಷ್ಪಲತ ಸ್ವಾಗತಿಸಿ, ಗ್ರಾಪಂ ಸದಸ್ಯ ಸುರೇಶ್ ವಂದಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News