ಪ್ರತಿಭಟನೆಗೆ ಮಣಿದ ಪಂಚಾಯತ್: ಅನಿಲಕೋಡಿ ರಸ್ತೆ ದುರಸ್ತಿ

Update: 2019-06-14 13:18 GMT

ಪುತ್ತೂರು: ತಾಲೂಕಿನ ಕೋಡಿಂಬಾಡಿ ಮತ್ತು ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಅನಿಲಕೋಡಿ ರಸ್ತೆಯ ಅವ್ಯವಸ್ಥೆಯ ಕುರಿತು ಗುರುವಾರ ಸ್ಥಳೀಯರು ನಡೆಸಿದ ಪ್ರತಿಭಟನೆಯ ಬೆನ್ನಲ್ಲೇ ಶುಕ್ರವಾರ ಕೋಡಿಂಬಾಡಿ ಮತ್ತು ಬನ್ನೂರು ಗ್ರಾಮ ಪಂಚಾಯತ್ ವತಿಯಿಂದ ರಸ್ತೆಯ ಇಕ್ಕೆಡೆಗಳಲ್ಲಿ ಜೆಸಿಬಿ ಮೂಲಕ ಚರಂಡಿಗಳ ನಿರ್ಮಾಣ ಮತ್ತು ಅಕ್ರಮ ರಚನೆಗಳ ತೆರವು ಕಾರ್ಯವನ್ನು ನಡೆಸಲಾಯಿತು. 

ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇರದ ಕಾರಣ ಪ್ರಥಮ ಮಳೆಗೆ ಈ ರಸ್ತೆ ಕೆಸರು ಗದ್ದೆಯಂತಾಗಿತ್ತು. ಸಾರ್ವಜನಿಕರು ಆಡಳಿತ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿ ಕೆಲ ಹೊತ್ತು ರಸ್ತೆ ತಡೆ ಮಾಡಿದ್ದರು. ಶುಕ್ರವಾರ ಎರಡೂ ಗ್ರಾಮ ಪಂಚಾಯತ್‍ಗಳ ವತಿಯಿಂದ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಯಿತು. ರಸ್ತೆಯ ಇಕ್ಕೆಡೆಗಳಲ್ಲೂ ಚರಂಡಿ ನಿರ್ಮಿಸಿ ನೀರು ಹರಿದು ಹೋಗಲು ಅಡ್ಡಿಯಾಗುವ ಅಕ್ರಮ ರಚನೆಗಳನ್ನು ತೆರವುಗೊಳಿಸಲು ಉಭಯ ಪಂಚಾಯತ್ ಆಡಳಿತ ನಿರ್ಧರಿಸಿದೆ.

ಶುಕ್ರವಾರ ಈ ಕುರಿತು ಗ್ರಾಮ ಪಂಚಾಯತ್‍ಗಳ ವತಿಯಿಂದ ಯಾವುದೇ ರೀತಿಯ ಪರಿಹಾರ ಕಾರ್ಯ ನಡೆಯದಿದ್ದರೆ ಶನಿವಾರ ರಸ್ತೆ ಬಂದ್ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ತಿಳಿಸಿದ್ದರು. ಆದರೆ ಬನ್ನೂರು ಮತ್ತು ಕೋಡಿಂಬಾಡಿ ಗ್ರಾಮ ಪಂಚಾಯತ್‍ಗಳು ಈ ಕುರಿತು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಗ್ರಾಮಸ್ಥರು ರದ್ದು ಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News