×
Ad

ಹಿರಿಯ ನ್ಯಾಯವಾದಿ ಎಂ.ಸೀತಾರಾಮ ಶೆಟ್ಟಿಯವರಿಗೆ ಅಂತಿಮ ವಿದಾಯ

Update: 2019-06-14 19:07 IST

ಮಂಗಳೂರು,ಜೂ.14:ಗುರುವಾರ ನಿಧನರಾದ ಹಿರಿಯ ನ್ಯಾಯವಾದಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಮಾಜಿ ಉಪಾಧ್ಯಕ್ಷ ಎಂ.ಸೀತಾರಾಮ ಶೆಟ್ಟಿಯವರಿಗೆ ನಗರದ ಲೊಯೆಲಾ ಸಭಾಂಗಣದಲ್ಲಿಂದು ಗಣ್ಯರ ಸಮ್ಮಖದಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು. ರಾಜ್ಯ ನಗರಾಭಿವೃದ್ಧಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್, ಮಾಜಿ ಸಂಸದ ಬಿ.ಇಬ್ರಾಹೀಂ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ ಸೋಜ, ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಗಣೇಶ್ ಕಾರ್ನಿಕ್, ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಧೀಶರಾದ ಸತ್ಯನಾರಾಯಣ ಆಚಾರ್ಯ, ದಕ್ಷಿಣ ಕನ್ನಡ ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಬಲ್ಲಾಳ್, ಮಾಜಿ ಅಧ್ಯಕ್ಷ ಎಸ್.ಪಿ ಚಂಗಪ್ಪ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಂಟ್ಸ್ ವೆಲ್ಫೋರ್ ಟ್ರಸ್ಟ್‌ನ ಅಧ್ಯಕ್ಷ ಸದಾನಂದ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕಾರ್ಮಿಕ ಮುಖಂಡ ಎಂ.ಎನ್.ಅಡ್ಯಂತಾಯ, ನ್ಯಾಯಾವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ, ಜಗದೀಶ್ ಶೇಣವ,ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಹನೀಫ್ ಮೊದಲಾದವರು ಅಂತಿಮ ಗೌರವ ಸಲ್ಲಿಸಿರು.ಬ ಳಿಕ ನಂದಿ ಗುಡ್ಡೆ ಸಶ್ಮಾನದಲ್ಲಿ ಬಂಟ ಸಂಪ್ರದಾಯದ ವಿಧಿ ವಿಧಾನಗಳ ಪ್ರಕಾರ ಕುಟುಂಬದ ಸದಸ್ಯರ ಮೂಲಕ ಅಂತ್ಯ ಸಂಸ್ಕಾರ ನಡೆಯಿತು.

ಮಂಗಳೂರಿನ ಹಿರಿಯ ನ್ಯಾಯವಾದಿಗಳಲ್ಲಿ ಖ್ಯಾತಿ ಪಡೆದಿದ್ದ ಸೀತಾರಾಮ ಶೆಟ್ಟಿ ಇನ್ನಿಲ್ಲ: ಮಂಗಳೂರಿನಲ್ಲಿ ನಾಲ್ಕು ದಶಗಳ ಕಾಲ ಖ್ಯಾತಿ ಪಡೆದಿದ್ದ ಮೂವರು ಹಿರಿಯ ನ್ಯಾಯವಾದಿಗಳ ಪೈಕಿ ಪ್ರಮುಖರಾಗಿದ್ದ ವೈ.ಟಿ.ಹೆಗ್ಡೆ, ಪುರುಷೋತ್ತಮ ಪೂಜಾರಿಯವರು ನಿಧನರಾಗಿದ್ದು, ಕೊನೆಯವರಾಗಿ ಉಳಿದುಕೊಂಡಿದ್ದ ಸೀತಾರಾಮ ಶೆಟ್ಟಿ ನಿಧನರಾಗುವುದರೊಂದಿಗೆ ಸುಮಾರು ನಾಲ್ಕು ದಶಕಗಳ ಕಾಲ ಮಂಗಳೂರು ನ್ಯಾಯಾಂಗ ಕ್ಷೇತ್ರದಲ್ಲಿ ವೃತ್ತಿಪರತೆಯೊಂದಿಗೆ ನ್ಯಾಯಾಂಗದ ಘನತೆ ಗೌರವಗಳನ್ನು ಉಳಿಸಿಕೊಂಡು ನ್ಯಾಯವಾದಿಗಳಾಗಿದ್ದ ಸೀತಾರಾಮ ಶೆಟ್ಟಿ ಯವರು ನಿಧನರಾಗಿರುವುದು ನಮ್ಮ ಪಾಲಿಗೆ ತುಂಬಲಾರದ ನಷ್ಟವಾಗಿದೆ ಎಂದು ಅವರ ಮೂಲಕ ವಕೀಲ ವೃತ್ತಿಯನ್ನು ಆರಂಭಿಸಿದ ಕಿರಿಯ ವಕೀಲರು ಸೀತಾರಾಮ ಶೆಟ್ಟಿಯವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ.

ಸೀತಾರಾಮ ಶೆಟ್ಟಿಯವರು ಕರ್ನಾಟಕ, ಕೇರಳ ಅಲ್ಲದೆ ಗೋವಾ ನ್ಯಾಯಾಲಯದಲ್ಲೂ ವಾದ ಮಂಡಿಸಿ ಖ್ಯಾತಿಗಳಿಸಿದವರು.ಮಲೆಯಾಳಂ ಭಾಷೆಯನ್ನು ಬಲ್ಲ ಇವರು ವಕೀಲ ವೃತ್ತಿಯನ್ನು ಆರಂಭಿಸಿರುವುದು ಕಾಸರಗೊಡಿನ ಹಿರಿಯ ನ್ಯಾಯವಾದಿ ಕಳ್ಳಿಗೆ ಮಾಹಬಲ ಭಂಡಾರಿಯವರ ಬಳಿ,1959 ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು 1959ರಲ್ಲಿ ನ್ಯಾಯವಾದಿ ಎನ್.ಎಸ್.ಸುವರ್ಣ ಅವರ ಬಳಿ ವಕೀಲ ವೃತ್ತಿಯನ್ನು ಆರಂಭಿಸಿ 1960ರಲ್ಲಿ ವಕೀಲರ ಪರಿಷತ್ ಪರೀಕ್ಷೆ ತೇರ್ಗಡೆಯಾದರು,1967ರಲ್ಲಿ ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಬಳಿಕ ಹಿಂತಿರುಗಿ ನೋಡಲಿಲ್ಲ. ಸಿಬಿಐಗೆ ವಿಶೇಷ ಅಭಿಯೋಜಕರಾಗಿ ಸೇವೆಸಲ್ಲಿಸಿದ್ದ ಅವರು ಬಳಿಕ ಷಕ್ರಬಾವಿ ಆಯೋಗ, ನ್ಯಾ.ಜಗನ್ನಾಥ ಶೆಟ್ಟಿ ಆಯೋಗ, ನ್ಯಾ.ರಾಮಚಂದ್ರ ಆಯೋಗ, ನ್ಯಾ.ಸದಾಶಿವ ಆಯೋಗ, ನ್ಯಾ.ವೈದ್ಯನಾಥ ಆಯೋಗ, ನ್ಯಾ.ಸದಾಶಿವ ಆಯೋಗ, ಪಾಟೀಲ ಆಯೋಗ ಸೇರಿದಂತೆ ವಿವಿಧ ಆಯೋಗಗಳ ಮೂಲಕ ಸರಕಾರದ ನ್ಯಾಯಾಂಗ ವ್ಯವಸ್ಥೆಗೂ ಅಪಾರ ಕೊಡುಗೆ ನೀಡಿದವರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಕರ್ನಾಟಕ ವಕೀಲರ ಪರಿಷತ್‌ನ ಸದಸ್ಯರಾಗಿ ಮೂರು ಬಾರಿ ಆಯ್ಕೆಯಾದವರು, ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದ ಮೂಸೆ ಕುಂಞಿ,ಪ್ರಕಾಶ್ ಕುಮಾರ್ ಕದ್ರಿ ಸೀತಾರಾಮ ಶೆಟ್ಟಿಯವರ ಶಿಷ್ಯರಾಗಿದ್ದವರು ಬಳಿಕ ನ್ಯಾಯಾಧೀಶರಾಗಿ ಆಯ್ಕೆಗೊಂಡವರು.

‘‘ಸೀತಾರಾಮ ಶೆಟ್ಟಿ ಸಮಾಜದ ಎಲ್ಲ ಜಾತಿ, ಧರ್ಮ ಜನರ ಪ್ರೀತಿಗೆ ಪಾತ್ರರಾಗಿರುವುದರ ಜೊತೆ ತಮ್ಮ ವೃತ್ತಿಯಲ್ಲಿ ಹೆಚ್ಚು ಶ್ರಮವಹಿಸಿ ಅದರಲ್ಲಿ ಕರ್ತವ್ಯ ಚ್ಯುತಿಯಾಗದಂತೆ ಎಚ್ಚರ ವಹಿಸಿತ್ತಿದ್ದ ಶ್ರಮಜೀವಿಯಾಗಿದ್ದರು. ಬಂಟ ಸಮುದಾಯಕ್ಕೆ ಸೇರಿದ್ದ ಸೀತಾರಾಮ ಶೆಟ್ಟಿ ಅವರು ಬಂಟ ಸಮಾಜದ ಮಾರ್ಗದರ್ಶಕರೂ ಆಗಿದ್ದರು. ಅವರ ವಕೀಲ ವೃತ್ತಿ ಪರತೆಯಿಂದ ದೇಶದ ಗಮನ ಸೆಳೆದ ನ್ಯಾಯವಾದಿಯಾಗಿದ್ದರು’’ಎಂದು ಅವರ ನಿಕಟವರ್ತಿಯಾಗಿದ್ದ ನ್ಯಾಯವಾದಿ ಕಳ್ಳಿಗೆ ತಾರನಾಥ ಶೆಟ್ಟಿ ಅಭಿಪ್ರಾಯಪಡುತ್ತಾರೆ.

ಜೂ.15: ಸಂತಾಪ ಸಭೆ: ದಕ್ಷಿಣ ಕನ್ನಡ ವಕೀಲರ ಸಂಘದ ವತಿಯಿಂದ ಅಗಲಿದ ನ್ಯಾಯವಾದಿ ಸೀತಾರಾಮ ಶೆಟ್ಟಿಯವರ ನಿಧನಕ್ಕೆ ಶನಿವಾರ ವಕೀಲರ ಸಂಘದ ಕಚೇರಿಯ ಸಭಾಂಗಣದಲ್ಲಿ ಬೆಳಗ್ಗೆ ಸಂತಾಪ ಸೂಚಕ ಸಭೆ ನಡೆಯಲಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಬಲ್ಲಾಳ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News