ಜನಸ್ನೇಹಿ ಠಾಣೆಗಾಗಿ ಪೊಲೀಸರಿಗೆ ತರಬೇತಿ: ಉಡುಪಿ ಎಸ್ಪಿ ನಿಶಾ ಜೇಮ್ಸ್

Update: 2019-06-14 14:17 GMT

ಉಡುಪಿ, ಜೂ.14: ದೂರು ಸೇರಿದಂತೆ ವಿವಿಧ ಕಾರಣಗಳಿಗಾಗಿ ಪೊಲೀಸ್ ಠಾಣೆಗಳಿಗೆ ಆಗಮಿಸುವ ಹಿರಿಯ ನಾಗರಿಕರು ಹಾಗೂ ಮಹಿಳೆಯರನ್ನು ಯಾವ ರೀತಿ ಸ್ವಾಗತಿಸಬೇಕು ಮತ್ತು ಅವರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ನಾಯರ್‌ಕೆರೆಯ 81 ವರ್ಷ ವಯಸ್ಸಿನ ಹಿರಿಯ ನಾಗರಿಕರು ಉಡುಪಿ ನಗರ ಠಾಣೆಗೆ ಪಾಸ್‌ಪೊರ್ಟ್ ವಿಚಾರಣೆಗೆ ಹೋದ ಸಂದರ್ಭ ಪೊಲೀಸರು ಅಸಭ್ಯವಾಗಿ ವರ್ತಿಸಿದ್ದರೆಂಬ ದೂರಿನ ಕರೆಗೆ ಸ್ಪಂದಿಸಿ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಹಿರಿಯ ನಾಗರಿಕರೊಂದಿಗೆ ದುರ್ನಡತೆ ತೋರಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ಸಂಬಂಧ ಠಾಣೆಯಲ್ಲಿ ಅಳವಡಿಸಲಾದ ಸಿಸಿಟಿವಿಯನ್ನು ಪರಿಶೀಲನೆ ಮಾಡಲಾಗುವುದು. ಈಗಾಗಲೇ ಪ್ರತಿ ಠಾಣೆಗಳಲ್ಲಿ ಸ್ವಾಗತಕಾರರ ನೇಮಕ ಮಾಡಲಾಗಿದ್ದು, ಅವರಿಗೆ ದೂರುದಾರರೊಂದಿಗೆ ಉತ್ತಮವಾಗಿ ವರ್ತಿಸುವ ಕುರಿತು ತರಬೇತಿ ನೀಡಿ ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿ ಮಾಡಲಾಗುವುದು ಎಂದರು.

24 ಗಂಟೆ ಅರ್ಲಟ್: ಮಳೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪೆನಿಗಳ ಇಂಜಿನಿಯರ್ ಜೊತೆ ಎರಡು ದಿನಗಳ ಕಾಲ ರಸ್ತೆ ಸುರಕ್ಷತಾ ಪರಿಶೋಧನೆಯನ್ನು ನಡೆಸಲಾಗಿದೆ. ಏಕಮುಖ ಸಂಚಾರ, ಜಂಕ್ಷನ್‌ಗಳ ಪರಿಶೀಲನೆ ಹಾಗೂ ರಸ್ತೆಯಲ್ಲೇ ನೀರು ನಿಲ್ಲುವ ಕುರಿತು ಪರಿ ಶೀಲನೆ ನಡೆಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಎಸ್ಪಿ ಹೇಳಿದರು.

ಅಪಘಾತ ಸಂಭವಿಸಿದಾಗ ವಾಹನಗಳ ತೆರವುಗೊಳಿಸಲು ಅನುಕೂಲವಾಗುವಂತೆ ದಿನದ 24ಗಂಟೆಗಳ ಕಾಲವೂ ಕಾರ್ಯಾಚರಿಸುವ ರೀತಿಯಲ್ಲಿ ಕಿರಿ ಮಂಜೇಶ್ವರ ಹಾಗೂ ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪ್ಪೊ ಎದುರು ಕ್ರೇನ್ ನಿಯೋಜಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಇದರೊಂದಿಗೆ ನಮ್ಮ ಪೊಲೀಸ್ ಗಸ್ತು ವಾಹನ ಕೂಡ ಕಾರ್ಯಾಚರಿಸಲಿದೆ ಎಂದರು.

ಶಾಲಾ ಮಕ್ಕಳ ಸಾಗಾಟ: ಪರ್ಕಳದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ರಿಕ್ಷಾ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು ಮಿತಿಮೀರಿ ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ ಮತ್ತು ಪರ್ಕಳದಲ್ಲಿ ಶುಕ್ರವಾರದ ಸಂತೆಯಲ್ಲಿ ಮೊಬೈಲ್ ಫೋನ್ ಕಳವಾಗುತ್ತಿರುವ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಸ್ಥಳೀಯೊಬ್ಬರು ಕರೆ ಮಾಡಿ ಒತ್ತಾಯಿಸಿದರು.

ಉಡುಪಿ ಕಿನ್ನಿಮೂಲ್ಕಿ ಸ್ವಾಗತಗೋಪುರ ಬಳಿ ಪಾದಾಚಾರಿ ಕ್ರಾಸಿಂಗ್ ಸಮಸ್ಯೆ, ಗೋವಿಂದ ಕಲ್ಯಾಣ ಮಂಟಪ ಬಳಿ ರಸ್ತೆ ಹೊಂಡ ಬಿದ್ದಿರುವುದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಖಾಸಗಿ ವಾಹನಗಳ ಪಾರ್ಕಿಂಗ್ಗೆ ಸಮಸ್ಯೆ, ನಾರ್ತ್ ಶಾಲೆ ಬಳಿ ರಸ್ತೆಯಲ್ಲೇ ಇಟ್ಟಿರುವ ಅಂಗಡಿಗಳ ಬೋರ್ಡ್ ಗಳಿಂದ ಸಂಚಾರಕ್ಕೆ ತೊಂದರೆ, ದ್ವಿಚಕ್ರ ವಾಹನ ಸವಾರರು ಹೈಬೀಮ್ ಲೈಟ್ ಬಳಕೆ, ಒಳಕಾಡು ಶಾಲೆ ಬಿಡುವ ವೇಳೆ ಯುವಕರು ದ್ವಿಚಕ್ರದಲ್ಲಿ ಬಂದು ಕೀಟಲೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದವು.

ಕಾರ್ಕಳ ಬಸ್ ನಿಲ್ದಾಣದ ಬಳಿಯ ಮಾರಿಗುಡಿ ದೇವಸ್ಥಾನದ ಎದುರು ಬೆಳಗ್ಗೆ ಕೂಲಿ ಕಾರ್ಮಿಕರು ಕಿಕ್ಕಿರಿದು ತುಂಬಿರುವುದರಿಂದ ಸಾರ್ವಜನಿಕರಿಗೆ ನಡೆದಾಡಲು ಸಮಸ್ಯೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದರು. ಹೆಬ್ರಿ ಕೆಎಸ್‌ಆರ್‌ಟಿಸಿ ಡಿಪೋ ಸ್ಥಾಪಿಸುವಂತೆ ಮಾಡಿದ ಮನವಿಗೆ ಈ ಕುರಿತು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.

ಕೊಲ್ಲೂರು ಪಾರ್ಕಿಂಗ್ ಸಮಸ್ಯೆ: ಕೊಲ್ಲೂರು ದೇವಸ್ಥಾನಕ್ಕೆ ಹೋಗುವ ರಸ್ತೆಯ ಮೇಲೆಯೇ ವಾಹನಗಳ ಪಾರ್ಕಿಂಗ್ ಮಾಡುತ್ತಿರುವುದರಿಂದ ಇತರ ವಾಹನಗಳಿಗೆ ಸಂಚರಿಸಲು ಹಾಗೂ ಪಾದಾಚಾರಿಯವರಿಗೆ ತಿರುಗಾಡಲು ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರು ಕರೆ ಮಾಡಿ ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರಗಿಸುವುದಾಗಿ ಹೇಳಿದರು.

ಉಡುಪಿ ಕಲ್ಸಂಕ ಬಳಿ ಪಾದಾಚಾರಿಗಳಿಗೆ ರಸ್ತೆ ದಾಟಲು ಅನಾನುಕೂಲ ವಾಗುತ್ತಿರುವ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ನಗರಸಭೆ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ಮುಗಿದ ಬಳಿಕ ನಗರಸಭೆಯಿಂದ ಅಗತ್ಯ ಇರುವ ಕಡೆಗಳಲ್ಲಿ ಝಿಬ್ರಾ ಕ್ರಾಸ್ ಹಾಕಲಾಗುವುದು. ವಾಹನಗಳು ನಿಧಾನವಾಗಿ ಸಂಚರಿಸುವಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು ಮತ್ತು ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಕೂಡ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ಹಾಲಮೂರ್ತಿ ರಾವ್, ಸೀತಾರಾಮ್ ಮೊದ ಲಾದವರು ಉಪಸ್ಥಿತರಿದ್ದರು.

ರಾ.ಹೆದ್ದಾರಿ ಸಮಸ್ಯೆ: ವಿಶೇಷ ತಂಡದಿಂದ ವರದಿ

ಜಿಲ್ಲಾಡಳಿತದ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಆರ್‌ಟಿಓ, ಪಿಡಬ್ಲುಡಿ, ಪೊಲೀಸ್ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ಬ್ಲಾಕ್ ಸ್ಪೋಟ್‌ಗಳನ್ನು ಗುರುತಿಸಲಾಗಿದ್ದು, ಅಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಪಟ್ಟಿ ಮಾಡಲಾಗಿದೆ. ಈ ವರದಿಯನ್ನು ಪ್ರಾಧಿಕಾರ ಹಾಗೂ ಆರ್‌ಟಿಓಗೆ ಸಲ್ಲಿಸಲಾಗಿದ್ದು, ಸಂಬಂಧಪಟ್ಟವರು ಈ ಕುರಿತು ಸೂಕ್ತ ಕ್ರಮಕೈಗೊಳ್ಳಲಿರುವರು ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.

ಕಳೆದ ಎರಡು ವಾರಗಳ ಪ್ರಕರಣಗಳು
ಮೇ 31ರಿಂದ ಈವರೆಗೆ ಜಿಲ್ಲೆಯಲ್ಲಿ 20 ಮಟ್ಕಾ ಪ್ರಕರಣಗಳಲ್ಲಿ 20, 7 ಜುಗಾರಿಯಲ್ಲಿ 33, ಆರು ಅಕ್ರಮ ಮದ್ಯ ಮಾರಾಟದಲ್ಲಿ 23 ಮಂದಿಯನ್ನು ಬಂಧಿಸಲಾಗಿದೆ. ಕೋಟ್ಪಾ 86, ಕುಡಿದು ವಾಹನ ಚಾಲನೆ 57, ಕರ್ಕಶ ಹಾರ್ನ್ 103, ಚಾಲನೆಯಲ್ಲಿ ಮೊಬೈಲ್ ಬಳಕೆ 58, ಹೆಲ್ಮೆಟ್ ರಹಿತ ಸವಾರಿ 1977, ಅತಿವೇಗ 135, ಇತರ ಮೋಟಾರ್ ಕಾಯಿದೆಯಡಿ 5409 ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News