ರಕ್ತಕ್ಕೆ ದೇಶ, ಗಡಿ, ಧರ್ಮದ ಹಂಗಿಲ್ಲ: ಬಸ್ರೂರು ರಾಜೀವ್ ಶೆಟ್ಟಿ

Update: 2019-06-14 14:19 GMT

ಉಡುಪಿ, ಜೂ.14: ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತವನ್ನು ಉತ್ಪಾದಿಸಲು ಆಗುವುದಿಲ್ಲ. ಹಲವಾರು ಜಾತಿ ಧರ್ಮಗಳು ಇದ್ದರೂ, ರಕ್ತಕ್ಕೆ ಯಾವುದೇ ದೇಶದ ಗಡಿ, ಧರ್ಮದ ಹಂಗಿಲ್ಲ. ಆರೋಗ್ಯವಂತ ಒಬ್ಬ ವ್ಯಕ್ತಿ ರಕ್ತದಾನದ ಮೂಲಕ ತನ್ನ ಜೀವಿತಾವಧಿಯಲ್ಲಿ 500ಕ್ಕೂ ಅಧಿಕ ಜನರ ಪ್ರಾಣ ವನ್ನು ಉಳಿಸಬಹುದು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಆಡಳಿತ ಸಮಿತಿ ಸದಸ್ಯಬಸ್ರೂರು ರಾಜೀವ್ ಶೆಟ್ಟಿ ತಿಳಿಸಿದ್ದಾರೆ.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಘಟಕದ ವತಿಯಿಂದ ರೆಡ್‌ಕ್ರಾಸ್ ಭವನದಲ್ಲಿ ಶುಕ್ರವಾರ ಆಯೋಜಿಸಲಾದ ರಕ್ತದಾನಿಗಳ ದಿನಾಚರಣೆಯನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.

ರಕ್ತದಾನ ಮಾಡುವ ಮೂಲಕ ಯಾವುದೇ ಖರ್ಚು ಇಲ್ಲದೇ ಜನರ ಪ್ರಾ ವನ್ನು ಉಳಿಸಬಹುದಾಗಿದೆ. ಆದುದರಿಂದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನಕ್ಕೆ ದೇವರ ಸೇವೆಯಷ್ಟೇ ಪುಣ್ಯ ಪಡೆಯಬಹುದು. ಅದೇ ರೀತಿ ಆರೋಗ್ಯ ಕೂಡ ವೃದ್ಧಿಯಾಗುತ್ತದೆ. ರಕ್ತದಾನದಿಂದ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಘಟಕದ ಸಭಾ ಪತಿ ಉಮೇಶ್ ಪ್ರಭು ಮಾತನಾಡಿ, ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಮೂಲಕ ರಕ್ತದಾನದ ಬಗ್ಗೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸಿ, ಯುವ ಜನತೆಯನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಶ್ರೀನಿವಾಸ ರಾವ್ ಕೆ.ಕೋಟ(75 ಬಾರಿ), ರಾಘವೇಂದ್ರ ಪೈ ಗಂಗೊಳ್ಳಿ(57), ಅಜ್ಮಲ್ ಅಸಾದಿ ಬ್ರಹ್ಮಾವರ(57), ಅಕ್ಬರ್ ಅಲಿ ಆತ್ರಾಡಿ (35), ಹರೀಶ್ ಕೋಟ್ಯಾನ್ ಸಂತೆಕಟ್ಟೆ(27), ಪರಶುರಾಮ್ ಅಚಾರ್ಯ ಬಡಗುಬೆಟ್ಟು(25 ಬಾರಿ) ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ರಕ್ತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಉಪ ಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ಸ್ವಾಗತಿಸಿದರು. ಗೌರವ ಖಜಾಂಚಿ ಟಿ.ಚಂದ್ರಶೇಖರ್ ವಂದಿಸಿದರು. ಆಡಳಿತ ಮಂಡಳಿಯ ಸದಸ್ಯೆ ಇಂದಿರಾ ಎಸ್.ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News